ಕಾಸರಗೋಡು: ಎಡರಂಗ ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಪೂರ್ಣಗೊಳಿಸಲು ಅಗತ್ಯ ಮೊತ್ತ ಮಂಜೂರುಗೊಳಿಸದಿರುವುದನ್ನು ಕಾಸರಗೋಡು ವೈದ್ಯಕೀಯ ಕಾಲೇಜು ಮುಷ್ಕರ ಸಮಿತಿ ತೀವ್ರವಾಗಿ ಖಂಡಿಸಿದೆ. ಕೇರಳದಲ್ಲಿ ಹೊಸದಾಗಿ ಘೋಷಿಸಲಾದ ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ಸರ್ಕಾರ ಕೇವಲ 57 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಈ ಮೊತ್ತವನ್ನು ಉಳಿದ ನಾಲ್ಕು ವೈದ್ಯಕೀಯ ಕಾಲೇಜುಗಳಲ್ಲಿ ವಿಂಗಡಿಸಿದಾಗ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಅಲ್ಪ ಪ್ರಮಾಣದ ಹಣ ಸಿಗುತ್ತಿದ್ದು, ಇದು ಜನರ ಕಣ್ಣಿಗೆ ಮಣ್ಣೇರಚುವ ತಂತ್ರವಾಗಿದೆ ಎಂದು ಪ್ರತಿಭಟನಾ ಸಮಿತಿ ಆರೋಪಿಸಿದೆ.
ಪ್ರತಿಭಟನಾ ಸಮಿತಿ ಅಧ್ಯಕ್ಷ ಮಾಹಿನ್ ಕೆಲೋಟ್ ಮಾತನಾಡಿ, ಸರ್ಕಾರ ಸಾಕಷ್ಟು ಹಣವನ್ನು ಹಂಚಿಕೆ ಮಾಡದೆ ಕಾಸರಗೋಡು ಜಿಲ್ಲೆಗೆ ಬಹಿರಂಗವಾಗಿ ಸವಾಲು ಹಾಕುತ್ತಿದೆ. ಕಾಸರಗೋಡು ವೈದ್ಯಕೀಯ ಕಾಲೇಜು ವಿಚಾರದಲ್ಲಿ ಭರವಸೆ ಬೇಕಾಗಿಲ್ಲ. ಅಗತ್ಯ ಹಣ ಮಂಜೂರುಗೊಳಿಸುವ ಮೂಲಕ ಅರ್ಧಕ್ಕೆ ಸ್ಥಗಿತಗೊಳಿಸಿರುವ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಗೆ ತಕ್ಷಣವೇ ಪೂರ್ತಿಗೊಳಿಸಬೇಕು. ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಪುನರಾರಂಭವಾಗುವವರೆಗೆ ಮುಷ್ಕರ ಮುಂದುವರಿಯಲಿದೆ. ಕಾಸರಗೋಡು ನಗರದಲ್ಲಿ ಸಹಿ ಗೋಡೆಯನ್ನು ಹೆಚ್ಚು ಜನಪ್ರಿಯಗೊಳಿಸಲಾಗುವುದು ಮತ್ತು ಮುಷ್ಕರವನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ ಹೊಸ ಬಸ್ ನಿಲ್ದಾಣ ವಠಾರದ ಮೇಲ್ಸೇತುವೆ ತಳಭಾಗದಲ್ಲಿ ಮನವಿ ಪತ್ರಕ್ಕೆ ಸಹಿ ಹಾಕುವ ಆಂದೋಲನದ ಮೂಲಕ ಮುಷ್ಕರ ಬಲಪಡಿಸಲಾಗುವುದು ಎಂದು ಕಾಸರಗೋಡು ವೈದ್ಯಕೀಯ ಕಾಲೇಜು ಪ್ರತಿಭಟನಾ ಸಮಿತಿಯ ಅಧ್ಯಕ್ಷ ಮಾಹಿನ್ ಕೇಳೋಟ್ ಮತ್ತು ಪ್ರಧಾನ ಸಂಚಾಲಕ ಜೆ.ಎಸ್. ಸೋಮಶೇಖರನ್ ಪ್ರತಿಭಟನಾ ಸಮಿತಿ ಮುಖಂಡರು ಘೋಷಿಸಿದರು.


