HEALTH TIPS

ನರೇಗಾವು ಭ್ರಷ್ಟಾಚಾರಕ್ಕೆ ಅನ್ವರ್ಥದಂತಿತ್ತು: ಶಿವರಾಜ್ ಸಿಂಗ್‌ ಚೌಹಾಣ್‌

ನವದೆಹಲಿ: 'ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ನರೇಗಾ ಎನ್ನುವಂತೆ ಈ ಯೋಜನೆ ಇತ್ತು. ಇದಕ್ಕಿಂತಲೂ ಜಿ ರಾಮ್‌ ಜಿ ಯೋಜನೆಯು ಅತ್ಯುತ್ತಮವಾಗಿದೆ' ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್‌ ಚೌಹಾಣ್‌ ಅವರು ಭಾನುವಾರ ಅಭಿಪ್ರಾಯಪಟ್ಟರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್‌ ಆರಂಭಿಸಲು ನಿಶ್ಚಯಿಸಿರುವ 'ನರೇಗಾ ಉಳಿಸಿ ಸಂಗ್ರಾಮ'ದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

'ಕಾಂಗ್ರೆಸ್‌ ಪಕ್ಷವು 'ನರೇಗಾ ಉಳಿಸಿ ಸಂಗ್ರಾಮ' ಎಂಬ ಅಭಿಯಾನವನ್ನು ಘೋಷಿಸಿದೆ. ಇದು ನಿಜವಾದ ಅರ್ಥದಲ್ಲಿ ಭ್ರಷ್ಟಾಚಾರ ಉಳಿಸಿ ಎಂದು ಹೇಳುವಂಥ ಅಭಿಯಾನವಾಗಿದೆ. ಲೋಕಸಭೆಯಲ್ಲಿ ಈ ಯೋಜನೆ ಕುರಿತು ಚರ್ಚೆ ನಡೆದಾಗ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಯಾಕೆ ಗೈರಾಗಿದ್ದರು' ಎಂದು ಪ್ರಶ್ನಿಸಿದರು.

'ನರೇಗಾ ಅಡಿ ನಡೆಸಲಾಗುವ ಕೆಲಸಗಳ ಕುರಿತು ಗ್ರಾಮ ಪಂಚಾಯಿತಿಗಳ ಲೆಕ್ಕಪರಿಶೋಧನೆ ವೇಳೆ 10 ಸಾವಿರದಿಂದ 51 ಸಾವಿರದವರೆಗೆ ದೂರುಗಳು ಬಂದಿವೆ. ಒಂದೇ ಕೆಲಸವನ್ನು ಪದೇ ಪದೇ ಮಾಡಿಸಲಾಗುತ್ತದೆ. ಕಾಲುವೆ ಮತ್ತು ರಸ್ತೆಗಳ ಸ್ವಚ್ಛತೆ ಮಾಡುವ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಲಾಗುತ್ತಿತ್ತು. ಕಾರ್ಮಿಕರಲ್ಲಿ ಶೇ 30ರಷ್ಟು ಮಂದಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿದ್ದರು' ಎಂದು ದೂರಿದರು.

'ನರೇಗಾ ಯೋಜನೆಗೆ ಯುಪಿಎ ಸರ್ಕಾರವು ₹2 ಲಕ್ಷ ಕೋಟಿ ನೀಡಿತ್ತು. ಆದರೆ, ಮೋದಿ ಸರ್ಕಾರವು ₹8.48 ಲಕ್ಷ ಕೋಟಿ ನೀಡಿದೆ. ನರೇಗಾ ಮೂಲಕ ಯಾವುದಾದರೂ ಶಾಶ್ವತ ಆಸ್ತಿಯನ್ನು ಸೃಷ್ಟಿಸಲಾಗಿದೆಯೇ? ಅಭಿವೃದ್ಧಿಗಾಗಿ ಹಣ ವಿನಿಯೋಗಿಸಲಾಗಿದೆಯೇ? ಕಾಂಗ್ರೆಸ್‌ ಎನ್ನುವುದು ಸುಳ್ಳಿನ ಕಾರ್ಖಾನೆ. ಈಗ ಇವರು ಕಾರ್ಮಿಕರಿಗೆ ಕೆಲಸ ಸಿಗುವುದಿಲ್ಲ ಎನ್ನುತ್ತಿದ್ದಾರೆ' ಎಂದರು.

'ಮುಂದಿನ ಆರ್ಥಿಕ ವರ್ಷದಲ್ಲಿ ಜಿ ರಾಮ್‌ ಜಿ ಯೋಜನೆಗಾಗಿ ₹1.51 ಲಕ್ಷ ಕೋಟಿ ಬಿಡುಗಡೆ ಮಾಡಲಾಗುವುದು. ಇದರಲ್ಲಿ ₹95,600 ಕೋಟಿಯನ್ನು ಕೇಂದ್ರ ಸರ್ಕಾರವೇ ನೀಡಲಿದೆ. 125 ದಿನಗಳಿಗೆ ನೀಡುವಷ್ಟು ಹಣ ಕೇಂದ್ರದ ಬಳಿ ಇದೆ. ಈ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ ಖಚಿತ' ಎಂದು ಹೇಳಿದರು.

 ರಣದೀಪ್‌ ಸಿಂಗ್‌ ಸುರ್ಜೇವಾಲಾ ಶಿವರಾಜ್‌ ಸಿಂಗ್‌ ಚೌಹಾಣ್‌ ಕೇಂದ್ರ ಗ್ರಾಮೀಣಾಭಿವೃದ್ಧ ಸಚಿವಜಿ ರಾಮ್‌ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್‌ ಸುಳ್ಳು ಸುದ್ದಿಗಳನ್ನು ಹರಡಬಾರದು. ಬದಲಿಗೆ ನರೇಗಾವನ್ನು ಉತ್ತಮಗೊಳಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಹೇಳಬೇಕುಗಿರಿರಾಜ್‌ ಸಿಂಗ್‌ ಕೇಂದ್ರ ಸಚಿವಬಡವರ ಮತ್ತು ಸಮಾಜದ ತಳಸಮುದಾಯಗಳ ಅಭಿವೃದ್ಧಿ ಉದ್ಯೋಗದ ಕುರಿತು ಕಾಂಗ್ರೆಸ್‌ ತಲೆಕೆಡಿಸಿಕೊಳ್ಳುವುದಿಲ್ಲ. ರಾಮನ ಕುರಿತು ಮಾತ್ರವೇ ಅವರಿಗೆ ಸಮಸ್ಯೆ ಇರುವುದುರಣದೀಪ್‌ ಸಿಂಗ್‌ ಸುರ್ಜೇವಾಲಾ ಕಾಂಗ್ರೆಸ್‌ ನಾಯಕದೆಹಲಿಯಲ್ಲಿ ಕುಳಿತ ಜನರು ಯಾವ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಅಥವಾ ಯಾವ ಗ್ರಾಮದಲ್ಲಿ ಕೆಲಸ ನಡೆಯಬೇಕು ಎಂದು ನಿರ್ಧರಿಸುತ್ತಾರೆ

'ಗಾಂಧಿ ಕನ್ನಡಕ ಪ್ರಚಾರಕ್ಕೆ ಮಾತ್ರ'

'ಕಳೆದ 11 ವರ್ಷಗಳಿಂದ ಗಾಂಧಿ ಅವರ ಕನ್ನಡಕವನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಅವರ ತತ್ವಾದರ್ಶಗಳನ್ನು ನಿರ್ಲಕ್ಷಿಸಲಾಗಿದೆ. ಅಂತೆಯೇ ಬಿಜೆಪಿಯು ರಾಮನ ಹೆಸರಿನಲ್ಲಿ ಅಧಿಕಾರಕ್ಕೇರಿತು. ಆದರೆ ಆತನ ತತ್ವಾದರ್ಶಗಳನ್ನು ಮರೆಯಿತು' ಎಂದು ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

ಭುವನೇಶ್ವರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು 'ನರೇಗಾ ಬದಲಿಗೆ ಜಿ ರಾಮ್‌ ಜಿ ಯೋಜನೆಯನ್ನು ತಂದು ಸುಮಾರು 50 ಕೋಟಿ ಬಡ ಜನರ ಜೀವನೋಪಾಯವನ್ನು ಕಿತ್ತುಕೊಳ್ಳಲಾಗಿದೆ' ಎಂದು ದೂರಿದರು. 'ನರೇಗಾವು ಬೇಡಿಕೆ ಕೇಂದ್ರಿತ ವ್ಯವಸ್ಥೆಯಾಗಿತ್ತು. ಕಾರ್ಮಿಕರು ತಮಗೆ ಕೆಲಸ ನೀಡಿ ಎಂದು ಪಂಚಾಯಿತಿಗಳನ್ನು ಆಗ್ರಹಿಸಬಹುದಿತ್ತು. ಕೆಲವು ದಿನಗಳ ಒಳಗಾಗಿ ಕೆಲಸ ನೀಡದಿದ್ದಲ್ಲಿ ವೇತನವನ್ನು ಪಾವತಿ ಮಾಡಬೇಕಿತ್ತು. ಇದು ನರೇಗಾ. ಆದರೆ ಹೊಸ ಕಾಯ್ದೆಯಲ್ಲಿ ಎಲ್ಲ ಕೆಲಸಗಳನ್ನೂ ದೆಹಲಿಯಿಂದಲೇ ನಿರ್ಧರಿಸಬೇಕೆಂದು ಪ್ರಧಾನಿ ಮೋದಿ ಅವರು ನಿಶ್ಚಯಿಸಿದ್ದಾರೆ' ಎಂದರು.

'ನರೇಗಾವು ಸಂಪೂರ್ಣ ಕೇಂದ್ರ ಸರ್ಕಾರ ಅನುದಾನದಲ್ಲಿ ನಡೆಯುತ್ತಿತ್ತು. ಈಗ ರಾಜ್ಯಗಳು ಶೇ 40ರಷ್ಟು ಹಣವನ್ನು ಭರಿಸಬೇಕಾಗಿದೆ. ರಾಜ್ಯ ಸರ್ಕಾರವೊಂದು ಇಷ್ಟೊಂದು ಹಣವನ್ನು ಮೀಸಲಿಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲಿಗೆ ಬಡವರಿಗೆ ನೀಡಲಾಗುವ ಕೆಲಸಗಳು ತಾನಾಗಿಯೇ ಕಡಿತವಾಗಲಿವೆ ಎಂಬುದೇ ಈ ಯೋಜನೆ ಹಿಂದಿನ ವಿಚಾರ' ಎಂದು ದೂರಿದರು.

ಮಾಕನ್‌ ಸಂಚಾಲಕ: ಜನವರಿ 10ಕ್ಕೆ ಆರಂಭವಾಗಿ 45 ದಿನಗಳವರೆಗೆ ನಡೆಯಲಿರುವ 'ನರೇಗಾ ಉಳಿಸಿ ಸಂಗ್ರಾಮ' ಅಭಿಯಾನಕ್ಕಾಗಿ ಕಾಂಗ್ರೆಸ್‌ ಪಕ್ಷವು ಸಮಿತಿಯೊಂದನ್ನು ರಚಿಸಿದ್ದು ಇದಕ್ಕೆ ಎಐಸಿಸಿ ಖಜಾಂಚಿ ಅಜಯ್‌ ಮಾಕನ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಮುಖಂಡ ಸಂದೀಪ್‌ ದೀಕ್ಷಿತ್‌ ಎಐಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಉದಿತ್‌ ರಾಜ್‌ ಹಾಗೂ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಮಿತಿಯಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries