ಕುಂಬಳೆ: ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಜಲ್ಲಿಕಲ್ಲು ಗಣಿಗಾರಿಕೆ ಮತ್ತು ಮಣ್ಣು ಅಗೆಯುವಿಕೆ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧರಾಗುತ್ತಿಲ್ಲ ಎಂದು ಸಾಮಾಜಿಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಎನ್. ಕೇಶವ ನಾಯಕ್ ನಾಯ್ಕಾಪು ಅವರು ಕುಂಬಳೆಯಲ್ಲಿ ಗುರುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಕೆಲವು ವರ್ಷಗಳಿಂದ, ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳನ್ನು ಅಂತರ್ ರಾಜ್ಯ ಮಾಫಿಯಾಗಳು ಕಳ್ಳಸಾಗಣೆ ಮಾಡುತ್ತಿವೆ. ಇಲ್ಲಿ ಅಧಿಕಾರಿಗಳೇ ಮಾಫಿಯಾ ತಂಡಗಳೊಂದಿಗೆ ಅವರನ್ನು ಬೆಂಬಲಿಸಲು ಕೆಲಸ ಮಾಡುತ್ತಿದೆ ಎಂದವರು ಆರೋಪಿಸಿದರು.
ಮೀಂಜ ಗ್ರಾಮ ಪಂಚಾಯತಿ ಕೋಳ್ಯೂರು ಪೊಳ್ಳಕಜೆಯ ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿರುವ ಕ್ವಾರಿಯಿಂದ ಜಲ್ಲಿಕಲ್ಲುಗಳನ್ನು ಕರ್ನಾಟಕಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ. ಕರ್ನಾಟಕಕ್ಕೆ ಒಂದು ಲೋಡ್ ಜಲ್ಲಿಕಲ್ಲು ತಲುಪಿದಾಗ ಮಾಫಿಯಾಗಳಿಗೆ 60,000 ರೂ.ಗಳಿಗಿಂತ ಹೆಚ್ಚು ಲಭಿಸುತ್ತದೆ. ಕುಂಬಳೆ ಬಳಿಯ ಅನಂತಪುರ, ಕೊಯಿಪ್ಪಾಡಿ ಗ್ರಾಮದಲ್ಲಿಯೂ ಅಕ್ರಮ ಜಲ್ಲಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಪೈವಳಿಕೆಯ ಬಾಯಾರು ಸಮೀಪದ ಪಾದೆಕಲ್ಲು ಪರಿಸರದಲ್ಲಿ ನಡೆಯುತ್ತಿರುವ ಭೂ ಮಾಫಿಯಾ ಮತ್ತು ಅನಂತಪುರ ಮತ್ತು ಎಡನಾಡ್ ಗ್ರಾಮಗಳಲ್ಲಿ ನಡೆಯುವ ಮರದ ಕಳ್ಳಸಾಗಣೆಯ ವಿರುದ್ಧ ಬೆರಳು ಎತ್ತಲು ಅಧಿಕಾರಿಗಳು ಸಿದ್ಧರಾಗುತ್ತಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾದ ದೂರಿಗೆ ಸರಿಯಾದ ಉತ್ತರಗಳು ತನಗೆ ಈಗಾಗಲೇ ಲಭ್ಯವಾಗಿದೆ. ಕೇಂದ್ರ ಪರಿಸರ ಸಚಿವಾಲಯಕ್ಕೂ ತಾನು ನೀಡಿದ ದೂರಿನ ಪತ್ರಕ್ಕೆ ಸಂಸದರ ಮೂಲಕ ಸೂಕ್ತ ಪರಿಶೀಲನೆಯ ಮಾರುತ್ತರ ಲಭಿಸಿದೆ. ಆದರೆ ರಾಜ್ಯ ಸರ್ಕಾರ ಉತ್ತರಿಸಲು ಈವರೆಗೂ ಸಿದ್ಧವಾಗಿಲ್ಲ. ಮಾಫಿಯಾ ವಿರುದ್ಧ ಕ್ರಮ ಕೈಗೊಂಡರೆ ತನ್ನನ್ನು ಕೊಲ್ಲುವರೆಂಬ ಭಯ ತನಗಿದೆ ಎಂದು ಮಂಜೇಶ್ವರ ತಹಶೀಲ್ದಾರ್ ಸ್ವತಃ ತನ್ನಲ್ಲಿ ಹೇಳಿರುವರು. ಈ ನಿಟ್ಟಿನಲ್ಲಿ ಜನಸಾಮಾನ್ಯರ ಧ್ವನಿಯಾಗಿ, ಪರಿಸರ ಸಂರಕ್ಷಣೆ, ಭ್ರಷ್ಟಾಚಾರ ತಡೆಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಾನು ವ್ಯಾಪಕ ಕ್ರಮಗಳೊಂದಿಗೆ ಭ್ರಷ್ಟರಿಗೆ ಉತ್ತರಿಸುವುದಾಗಿ ಎನ್.ಕೇಶವ ನಾಯಕ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

.jpg)
.heic)
