HEALTH TIPS

ಭಾಷಾ ಮಸೂದೆಯ ಕರಿನೆರಳಿನಲ್ಲಿ ಗಡಿನಾಡ ಜನತೆ-ಮಸೂದೆಗೆ ತಿದ್ದುಪಡಿ ತರಲು ಮತ್ತೆ ಬೀದಿಗಿಳಿಯಲು ಸಜ್ಜಾದ ಕನ್ನಡಿಗರು

ಕಾಸರಗೋಡು: ಕೇರಳ ಸರ್ಕಾರದ ಮಲಯಾಳ ಭಾಷಾ ಮಸೂದೆ-2025'ರ ಕರಿನೆರಳಿನಲ್ಲಿ ಗಡಿನಾಡ ಕನ್ನಡಿಗರು ಕಾಲ ಕಳೆಯುತ್ತಿದ್ದು, ಕನ್ನಡ ಭಾಷೆ ಮತ್ತು ಸಂಸ್ಕøತಿಯ ಮೇಲೆ ಪ್ರಹಾರ ನಿಡಲಿರುವ ಈ ಮಸೂದೆಗೆ ಅಗತ್ಯ ತಿದ್ದುಪಡಿ ತರುವಂತೆ ಹೋರಾಟ ಮುಂದುವರಿದಿದೆ. 

ಕಾಸರಗೋಡಿನ ಕನ್ನಡಿಗರನ್ನು ಮಣಿಸಲು ಮಲಯಾಳೀಕರಣದ ಮೂಲಕ ಆರಂಭಿಕ ಹೆಜ್ಜೆಯಿರಿಸಿದ ಕೇರಳ ಸರ್ಕಾರ ಕನ್ನಡಿಗರ ಮೇಲೆ ಬಲವಂತದ ಮಲಯಾಳ ಹೇರಿಕೆಗೆ ಮುಂದಾಯಿತು. ನಂತರ ಕನ್ನಡ ಪ್ರದೇಶದ ಸ್ಥಳನಾಮವನ್ನು ಮಲಯಾಳೀಕರಣಗೊಳಿಸುವುದು, ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕಾತಿ, ಸರ್ಕಾರಿ ಕಚೇರಿಗಳಲ್ಲಿ ಮಲಯಾಳಿ ಅಧಿಕಾರಿಗಳ ನೇಮಕ,  ಸುತ್ತೋಲೆ, ಅರ್ಜಿ ನಮೂನೆಗಳನ್ನು ಮಲಯಾಳದಲ್ಲೇ ಪೂರೈಸುವ ಮೂಲಕ ಕನ್ನಡಿಗರಲ್ಲಿ ಕಡ್ಡಾಯ ಮಲಯಾಳ ಹೇರಿಕೆಯ ಒಂದೊಂದೇ ಹಂತವನ್ನು ದಾಟುತ್ತಾ ಬಂದಿದೆ.

ಕನ್ನಡ ನಶಿಸುತ್ತಿರುವುದಾಗಿ ಬಿಂಬಿಸುವ ಸರ್ಕಾರ:

ಕಾಸರಗೋಡಿನಲ್ಲಿ ಅರ್ಜಿ, ನಮೂನೆಗಳನ್ನು ಸರ್ಕಾರ ಮಲಯಾಳದಲ್ಲೇ ಪೂರೈಸುವ ಮೂಲಕ ಇದನ್ನು ಭರ್ತಿಮಾಡಲು ಮಲಯಾಳ ಬಲ್ಲವರನ್ನೇ ಆಶ್ರಯಿಸಬೇಕಾದ ಅನಿವಾರ್ಯ ಪರಿಸ್ಥಿತಿಯತ್ತ ಸರ್ಕಾರ ಇಲ್ಲಿನ ಕನ್ನಡಿಗರನ್ನು ತಳ್ಳುತ್ತಿದೆ.  ಇನ್ನು ಅರ್ಜಿಗಳನ್ನು ಬರೆದುಕೊಡುವಾಗ ಮಲಯಾಳದಲ್ಲೇ ಇರಬೇಕೆಂದು ಕೆಲವು ಅಧಿಕಾರಿಗಳು ತಾಕೀತು ಮಾಡುತ್ತಾರೆ. ಈ ಮೂಲಕ ಕನ್ನಡದ ಅರ್ಜಿಗಳು ಕಚೇರಿಗೆ ತಲುಪದಂತೆ ಮಾಡಿ, ಕನ್ನಡಿಗರು ಮಲಯಾಳದಲ್ಲೇ ಓದಲು, ಬರೆಯಲು ಸಮರ್ಥರಾಗಿದ್ದಾರೆ ಎಂಬುದನ್ನು ಬಿಂಬಿಸುವುದರ ಜತೆಗೆ ಇಲ್ಲಿ ಕನ್ನಡಗರ ಸಂಖ್ಯೆ ಕುಸಿದಿರುವುದಾಗಿ ಅಧಿಕಾರಿಗಳು ಸರ್ಕಾರದ ಮುಂದೆ ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸಕ್ತ ಸರ್ಕಾರ ಮಲಯಾಳ ಕಲಿಕೆಗಾಗಿ ಕನ್ನಡಿಗರನ್ನು ಪ್ರೇರೇಪಿಸುತ್ತಿದೆ. ಜಿಲ್ಲೆಯ ವಿವಿಧೆಡೆ ಬುಡಕಟ್ಟು ಜನಾಂಗ ಸೇರಿದಂತೆ ವಿವಿಧ ಉನ್ನತಿ(ಕಾಲನಿ)ಗಳಲ್ಲಿ ಮಲಯಾಳ ಕಲಿಕೆಗೆ ಪ್ರತ್ಯೇಕ ಕೇಂದ್ರಗಳನ್ನೂ ತೆರೆದಿದೆ. ಕೆಲವು ಜನರಿಗೆ ಮಲಯಾಳದಲ್ಲಿರುವ ಸರ್ಕಾರದ ಸುತ್ತೋಲೆ, ಅರ್ಜಿ ನಮೂನೆ, ಆದೇಶಗಳನ್ನು ಓದಿ ಮನನ ಮಾಡಿಕೊಳ್ಳಲು ಸಾಧ್ಯವಾಗದಿರುವುದರಿಂದ ಮಲಯಾಳ ಕಲಿಕೆಗೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂಬುದಾಗಿ ಸರ್ಕಾರವೇ ಘೋಷಿಸುವ ಮೂಲಕ ಕನ್ನಡದಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಸರ್ಕಾರವೇ ಒಪ್ಪಿಕೊಂಡಂತಾಗಿದೆ. 

ಕಾಸರಗೋಡಿನಲ್ಲಿ ಕನ್ನಡ ಕಲಿತು ಯಾವುದೇ ಪ್ರಯೋಜನವಿಲ್ಲ. ಮಲಯಾಳ ಕಲಿಕೆಯಿಂದ ಮಾತ್ರ ಸರ್ಕಾರಿ ಉದ್ಯೋಗದ ಜತೆಗೆ ವಿವಿಧ ಸವಲತ್ತು ಸಿಗಲು ಸಾಧ್ಯ ಎಂಬ ಆಶಯವನ್ನು ಕನ್ನಡಿಗರಲ್ಲಿ ತುಂಬುವ ಕೆಲಸವನ್ನೂ ತೆರೆಮರೆಯಲ್ಲಿ ನಡೆಸಲಾಗುತ್ತಿದೆ.

ಇಲ್ಲಿನ ಕನ್ನಡಿಗರು ಇದೇ ಮಣ್ಣಿನ ಮೂಲ ನಿವಾಸಿಗಳಾಗಿದ್ದು, ಹಲವು ಭಾಷೆಗಳನ್ನಾಡುವ ಇಲ್ಲಿನ ಜನತೆಯನ್ನು ಕನ್ನಡಿಗರೆಂದು ಪರಿಗಣಿಸಲು ಸರ್ಕಾರ ಮುಂದಾಗುತ್ತಿಲ್ಲ. ಕಾಸರಗೋಡಿನಲ್ಲಿ ಕನ್ನಡ, ತುಳು, ಮಲಯಾಳ, ಕರಾಡ, ಹವ್ಯಕ, ಮರಾಟಿ, ಕೊಂಕಣಿ, ಉರ್ದು, ಬ್ಯಾರಿಭಾಷೆ ಸೇರಿದಂತೆ ವಿವಿಧ ಭಾಷೆಗಳನ್ನಾಡುವ ಕನ್ನಡಿಗರಿದ್ದಾರೆ. ಇನ್ನೂರಕ್ಕೂ ಮೇಲ್ಪಟ್ಟು ಕನ್ನಡ ಮಾಧ್ಯಮ ಶಾಲೆಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, 30ಸಾವಿರಕ್ಕೂ ಹೆಚ್ಚು ಮಂದಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಕಾಸರಗೋಡಿಗೆ ಸಂವಿಧಾನಾತ್ಮಕವಾಗಿ ಲಭ್ಯವಾಗಬೇಕಾದ ಸವಲತ್ತುಗಳನ್ನು ಒದಗಿಸುವಲ್ಲೂ ಸರ್ಕಾರ ವಿಫಲವಾಗಿದೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. 


ಸರ್ಕಾರ ಸ್ಪಷ್ಟನೆ ನೀಡಲಿ:

ಸರ್ಕಾರ ಮಂಡಿಸಿರುವ ಭಾಷಾ ಮಸೂದೆಯಲ್ಲಿ ಕನ್ನಡ ಶಾಲೆಗಳಲ್ಲಿ ಕನ್ನಡ ಮಕ್ಕಳಿಗೆ ಮಲಯಾಳ ಕಲಿಕೆಗೆ ಅವಕಾಶವಿದೆ ಎಂಬ ಅರ್ಥ ಬರುವ ರೀತಿಯ ವ್ಯಾಖ್ಯಾನವಿದ್ದು, ಇದು ಕಡ್ಡಾಯವಲ್ಲ, ಐಚ್ಛಿಕ ಎಂಬುದನ್ನು ಸ್ಪಷ್ಟಪಡಿಸಬೇಕು, ಕನ್ನಡದಲ್ಲಿ ಅರ್ಜಿ ನಮೂನೆ ಸ್ವೀಕರಿಸುವುದರ ಜತೆಗೆ ಕನ್ನಡದಲ್ಲೇ ಉತ್ತರ ನೀಡುವ ಆದೇಶ ಕಡತಕ್ಕೆ ಸೀಮಿತರವಾಗಿರದೆ, ಸಮರ್ಪಕವಾಗಿ ಜಾರಿಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಬೇಕು, ಭಾಷಾ ಅಲ್ಪಸಂಖ್ಯಾತ ಪ್ರದೇಶದ ನಾಮಫಲಕಗಳಲ್ಲಿ ಮಲಯಾಳ, ಆಂಗ್ಲದ ಜತೆಗೆ ಕನ್ನಡದಲ್ಲೂ ಕಡ್ಡಾಯವಾಗಿ ನಮೂದಿಸುವ ಬಗ್ಗೆ ಖಚಿತಪಡಿಸಬೇಕು, ಸರ್ಕಾರಿ ಡಿಜಿಟಲೀಕರಣದಲ್ಲಿ ಕನ್ನಡದಲ್ಲಿ ಮಾಹಿತಿ ಒದಗಿಸುವುದರ ಜತೆಗೆ ಕನ್ನಡದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿರುವುದಾಗಿ ಖಚಿತಪಡಿಸಬೇಕು, ಕನ್ನಡ ಎಲ್.ಡಿ ಕ್ಲರ್ಕ್, ಕನ್ನಡ ಮಾಧ್ಯಮ ಅಧ್ಯಾಪಕ ಹುದ್ದೆಗೆ ಒಂದರಿಂದ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿರಬೇಕೆಂಬ ಮೂಲ ವಿದ್ಯಾರ್ಹತೆಯ ರಕ್ಷಣೆ ನೀಡಬೇಕು ಎಂಬಿತ್ಯಾದಿ ಬೇಡಿಕೆಯುಳ್ಳ ಮನವಿಯನ್ನು ಜಿಲ್ಲೆಯ ಐದು ಮಂದಿ ಶಾಸಕರುಗಳಿಗೆ ಕನ್ನಡಪರ ಸಂಘಟನೆಗಳು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries