ಉಪ್ಪಳ: ಮಂಗಲ್ಪಾಡಿ ಪಂ.ನ 7ನೇ ವಾರ್ಡ್ ಪ್ರತಾಪನಗರ ಒಳರಸ್ತೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮಂಜೂರಾದ 5 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾದದ್ದು ಮಾತ್ರವಲ್ಲದೆ ಕೆಲಸ ಆರಂಭಗೊಂಡಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮುಂಚಿತವೇ ಇಲ್ಲಿ ಚರಂಡಿ ನಿರ್ಮಿಸಲು ಗುತ್ತಿಗೆದಾರ ಹೊಂಡತೋಡಿ ಮುಹೂರ್ತ ಮಾಡಿದ್ದಾರೆ. ಆದರೆ ಇದರಿಂದಾಗಿ ಜನರಿಗೆ ಸಮಸ್ಯೆ ಮತ್ತಷ್ಟು ತೀವ್ರಗೊಂಡಿತು. ಹೊಂಡ ತೋಡುವ ವೇಳೆ ನೀರಿನ ಪೈಪ್‍ಗೆ ಹಾನಿಯಾಗಿದ್ದು, ಇದರಿಂದ ನೀರು ಪೋಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ಇಲ್ಲಿ ನೀರು ಪೋಲಾಗುತ್ತಿದ್ದು, ನೀರಿನ ವೇಗ ಕಡಿಮೆಯಾಗಿ ಎತ್ತರದ ಸ್ಥಳಗಳಲ್ಲಿನ ಮನೆಗಳಿಗೆ ನೀರು ವಿತರಣೆಯಾಗುತ್ತಿಲ್ಲವೆಂಬ ದೂರಿದೆ. ಒಂದು ಕೆಲಸಮಾಡಲು ಹೋಗಿ ಇನ್ನೊಂದನ್ನು ಹಾನಿ ಮಾಡಿದ್ದಲ್ಲದೆ ಆ ಬಳಿಕವೂ ಇಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆದಿಲ್ಲ. ಶೀಘ್ರವೇ ಚರಂಡಿ ನಿರ್ಮಿಸಬೇಕು, ಪೋಲಾಗುತ್ತಿರುವ ನೀರನ್ನು ತಡೆದು ಸೂಕ್ತ ರೀತಿಯಲ್ಲಿ ನೀರು ವಿತರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

.jpg)
