ಪಯ್ಯನ್ನೂರು: ಹುತಾತ್ಮರ ನಿಧಿ ವಂಚನೆಯ ಮಾಹಿತಿಯನ್ನು ಬಹಿರಂಗಪಡಿಸಿದ ಕಣ್ಣೂರು ಜಿಲ್ಲಾ ಸಮಿತಿ ಸದಸ್ಯ ವಿ. ಕುಂಞಿಕೃಷ್ಣನ್ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪೆರೋಲ್ ಮೇಲೆ ಬಿಡುಗಡೆಯಾದ ಆರೋಪಿಯೂ ಭಾಗವಹಿಸಿದ್ದು ವಿವಾದಕ್ಕೆಡೆಯಾಗಿದೆ.
ಪೊಲೀಸರ ಮೇಲೆ ಸ್ಟೀಲ್ ಬಾಂಬ್ ಎಸೆದ ಆರೋಪದಲ್ಲಿ ಶಿಕ್ಷೆಗೊಳಗಾದ ಸಿಪಿಎಂ ನಾಯಕ ವಿ.ಕೆ. ನಿಶಾದ್, ಪೆರೋಲ್ ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ. ನಿಶಾದ್ ತನ್ನ ತಂದೆಯ ಅನಾರೋಗ್ಯವನ್ನು ಉಲ್ಲೇಖಿಸಿ ತುರ್ತು ಪೆರೋಲ್ ಪಡೆದಿದ್ದ.
ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಪೆರೋಲ್ ನಿಯಮಗಳು ಹೇಳುತ್ತವೆ. 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ವಿ.ಕೆ. ನಿಶಾದ್ ಕೇವಲ ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದಾನೆ. ಮೆರವಣಿಗೆ ನಂತರ ನಿಶಾದ್ ಜೈಲಿಗೆ ಮರಳುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದವು.
ಆಗಸ್ಟ್ 1, 2012 ರಂದು ಪಯ್ಯನ್ನೂರಿನಲ್ಲಿ ಪೊಲೀಸ್ ತಂಡವನ್ನು ಸಾಗಿಸುತ್ತಿದ್ದ ಜೀಪಿನ ಮೇಲೆ ಸ್ಟೀಲ್ ಬಾಂಬ್ ಎಸೆದು ಕೊಲ್ಲಲು ಪ್ರಯತ್ನಿಸಿದ ಪ್ರಕರಣದಲ್ಲಿ ವಿ.ಕೆ. ನಿಶಾದ್ ಶಿಕ್ಷೆಗೊಳಗಾಗಿದ್ದ. ಬಾಂಬ್ ಎಸೆದದ್ದಕ್ಕೆ ಐದು ವರ್ಷಗಳು, ಕೊಲೆ ಯತ್ನಕ್ಕೆ ಹತ್ತು ವರ್ಷಗಳು ಮತ್ತು ಸ್ಫೋಟಕ ಕಾಯ್ದೆಗೆ ಐದು ವರ್ಷಗಳು ಸೇರಿದಂತೆ ಒಟ್ಟು 20 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ವಿ.ಕೆ. ನಿಶಾದ್ ಗೆ ತಳಿಪರಂಬ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ.ವಿ. ನಂದಕುಮಾರ್ ಶಿಕ್ಷೆ ವಿಧಿಸಿದ್ದರು.

