HEALTH TIPS

NCP ಮುಖಂಡರಿಂದ ಫಡಣವೀಸ್‌ ಭೇಟಿ: ಪಕ್ಷದ ಭವಿಷ್ಯದ ಬಗ್ಗೆ ಮುಂದುವರಿದ ಅನಿಶ್ಚಿತತೆ

ಮುಂಬೈ: ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನದಿಂದ ಪಕ್ಷದ ಭವಿಷ್ಯದ ಬಗ್ಗೆ ಅನಿಶ್ಚಿತತೆ ತಲೆದೋರಿರುವ ನಡುವೆಯೇ ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕರು ಶುಕ್ರವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಇಲ್ಲಿ ಭೇಟಿಯಾದರು.

ದಕ್ಷಿಣ ಮುಂಬೈನಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ 'ವರ್ಷಾ'ದಲ್ಲಿ ಸುಮಾರು ಒಂದೂವರೆ ಗಂಟೆ ನಡೆದ ಸಭೆಯಲ್ಲಿ ಛಗನ್ ಭುಜಬಲ್, ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ ಮತ್ತು ಮಾಜಿ ಸಚಿವ ಧನಂಜಯ ಮುಂಡೆ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪವಾರ್ ಅವರ ಹಠಾತ್ ನಿಧನದ ನಂತರ ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಪಕ್ಷದ ಮುಂದಿನ ದಾರಿ ಕುರಿತು ಚರ್ಚಿಸಲು ನಾಯಕರು ಫಡಣವೀಸ್‌ ಅವರನ್ನು ಭೇಟಿಯಾಗಿದ್ದಾರೆ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ. ಆದರೆ, ಸಭೆಯಲ್ಲಿ ಯಾವ ವಿಷಯಗಳು ಚರ್ಚೆಗೆ ಬಂದವು ಎಂಬುದು ಸ್ಪಷ್ಟವಾಗಿಲ್ಲ. ಸಭೆಯ ನಂತರ ಎರಡೂ ಕಡೆಯವರು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿಲ್ಲ.

ಅಜಿತ್‌ ಪವಾರ್‌ ನೇತೃತ್ವ ವಹಿಸಿದ್ದ ಎನ್‌ಸಿಪಿಯು ಬಿಜೆಪಿ ಮತ್ತು ಶಿವಸೇನಾ ಜತೆ ರಾಜ್ಯದಲ್ಲಿ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದ ಭಾಗವಾಗಿದೆ.

ಅಜಿತ್ ಪವಾರ್ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಬೇಕೆಂದು ಎನ್‌ಸಿಪಿ ಸಚಿವ ನರಹರಿ ಜಿರ್ವಾಲ್ ಅವರು ಗುರುವಾರ ಬಹಿರಂಗವಾಗಿ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದರು. ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಸಿಐಡಿ ತನಿಖೆ ಆರಂಭ: ಅಜಿತ್ ಪವಾರ್ ಮತ್ತು ಇತರ ನಾಲ್ವರ ಸಾವಿಗೆ ಕಾರಣವಾದ ವಿಮಾನ ಅಪಘಾತದ ಕುರಿತು ಮಹಾರಾಷ್ಟ್ರ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಜನವರಿ 28ರ ದುರಂತದ ಬಳಿಕ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ದಾಖಲಾಗಿರುವ ಆಕಸ್ಮಿಕ ಸಾವು ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ರಾಜ್ಯ ಪೊಲೀಸರು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್ ಪವಾರ್‌ (66) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries