ಆದರೆ ಅಂತಹ 'ರೀತಿಯು' ಸಾಂವಿಧಾನಿಕ ಚೌಕಟ್ಟು ಮತ್ತು ನೈಸರ್ಗಿಕ ನ್ಯಾಯದ ತತ್ವಗಳ ಒಳಗೆ ಇರಬೇಕು ಹಾಗೂ ಪಾರದರ್ಶಕವಾಗಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಬುಧವಾರ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ. ಜಾಯಮಾಲ್ಯ ಬಾಗ್ಚಿ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಮತದಾರರ ಪಟ್ಟಿಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮಗಳಿಂದ, ವಿಶೇಷವಾಗಿ ಆಕ್ಷೇಪಗಳ ಸಲ್ಲಿಕೆ ಮತ್ತು ಹಕ್ಕು ಕೋರಿಕೆ ಪ್ರಕ್ರಿಯೆಯನ್ನು ವಿವರಿಸುವ ಮತದಾರರ ನೋಂದಣಿ ನಿಯಮಗಳು-1960ರ ನಿಯಮ 13ರಡಿ ಫಾರ್ಮ್ 6ರಿಂದ ವಿಮುಖಗೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆಯೇ? ಎಸ್‌ಐಆರ್ ಗಾಗಿ ಫಾರ್ಮ್ 6ರಲ್ಲಿ ಪಟ್ಟಿ ಮಾಡಿರುವ ದಾಖಲೆಗಳನ್ನು ಮೀರಿ ತನ್ನದೇ ಆದ ದಾಖಲೆಗಳನ್ನು ನಿಗದಿಪಡಿಸಬಹುದೇ? ಎಂದು ನ್ಯಾ. ಬಾಗ್ಚಿ ಅವರು ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರನ್ನು ಪ್ರಶ್ನಿಸಿದರು.
ನಿಯಮ 13 ಫಾರ್ಮ್ 6ನ್ನು ಅಧಿಸೂಚಿಸಲು ಅಧಿಕಾರ ನೀಡುವ ನಿಯಮವಾಗಿದೆ. ಫಾರ್ಮ್ 6ರಲ್ಲಿ ಸುಮಾರು ಆರು ದಾಖಲೆಗಳಿದ್ದರೆ, ನಿಮ್ಮ ಎಸ್‌ಐಆರ್‌ನಲ್ಲಿ 11 ದಾಖಲೆಗಳನ್ನು ನಿಗದಿಪಡಿಸಲಾಗಿದೆ. ನೀವು ಜನ್ಮಸ್ಥಳ, ವಾಸಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳ ಸಂಖ್ಯೆಯನ್ನು ಹೆಚ್ಚಿಸಬಹುದೇ ಅಥವಾ ಕಡಿತಗೊಳಿಸಬಹುದೇ? ನೀವು ಫಾರ್ಮ್ 6ರಲ್ಲಿರುವ ದಾಖಲೆಗಳನ್ನು ನೋಡುವುದಿಲ್ಲ, 11 ದಾಖಲೆಗಳನ್ನು ಮಾತ್ರ ನೋಡುತ್ತೀರಾ ಎಂಬುದಕ್ಕೆ ಉತ್ತರಿಸಬೇಕು ಎಂದು ನ್ಯಾ. ಬಾಗ್ಚಿ ಹೇಳಿದರು.
ಹೌದು, ಅಧಿಕಾರ ನಿರ್ಬಂಧಿತವಲ್ಲ ಎಂಬ ಕುರಿತು ಯಾವುದೇ ಚರ್ಚೆಗೆ ಅವಕಾಶವಿಲ್ಲ. ಆದರೆ ಅದು ಚುನಾವಣಾ ಆಯೋಗಕ್ಕೆ ವಿಶಿಷ್ಟವಾಗಿದೆ. ಈ ವಿಷಯದಲ್ಲಿ ಆಯೋಗವು ವ್ಯಾಪಕ ವಿವೇಚನಾಧಿಕಾರ ಹೊಂದಿದ್ದರೂ, ಎಸ್‌ಐಆರ್‌ಗೆ ಮಾರ್ಗಸೂಚಿಯೂ ಇದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ದ್ವಿವೇದಿ, ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಶಾಸನಬದ್ಧ ನಿಯಮಗಳ ಪ್ರಕಾರವೇ ನಡೆಸಬೇಕೆಂದಿಲ್ಲ. ಆದರೆ ಯಾವುದೇ ವಿಶೇಷ ಸಂದರ್ಭಗಳು ಅಸ್ತಿತ್ವದಲ್ಲಿದ್ದರೆ ಅದು ವಿಭಿನ್ನವಾಗಿ ನಡೆಯಬಹುದು ಎಂದು ಹೇಳಿದರು.
ಸಮಾನತೆ, ನ್ಯಾಯಪರತೆ ಮತ್ತು ಪಾರದರ್ಶಕತೆಯ ಮೂಲಭೂತ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸಿ ಎಸ್‌ಐಆರ್ ನಡೆಸಬಹುದು ಎಂದು ಚುನಾವಣಾ ಆಯೋಗ ಹೇಳುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

