ನವದೆಹಲಿ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಶುದ್ಧ ಮತ್ತು ನಿಖರವಾದ ಮತದಾರರ ಪಟ್ಟಿಯ ಮೇಲೆ ನಿಂತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ಶನಿವಾರ (ಜ.24) ಪ್ರತಿಪಾದಿಸಿದ್ದಾರೆ.
ಈ ರಾಷ್ಟ್ರೀಯ ಮತದಾರರ ದಿನಾಚರಣೆಯ ಮುನ್ನಾದಿನದಂದು ಮಾತನಾಡಿದ ಜ್ಞಾನೇಶ್ ಕುಮಾರ್ , ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ದೇಶದ ಉಳಿದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದಾರೆ.
SIR: ಅರ್ಹರಿಗೆ ಸ್ಥಾನ, ಅನರ್ಹರಿಗೆ ಗೇಟ್‌ಪಾಸ್
ಚುನಾವಣಾ ಆಯೋಗದ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಸಂದೇಶ ನೀಡಿದ ಜ್ಞಾನೇಶ್ ಕುಮಾರ್, ಶುದ್ಧ ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಬೆನ್ನೆಲುಬಾಗಿದೆ. ಪ್ರತಿಯೊಬ್ಬ ಅರ್ಹ ಮತದಾರನ ಹೆಸರು ಪಟ್ಟಿಯಲ್ಲಿರಬೇಕು ಮತ್ತು ಯಾವುದೇ ಅನರ್ಹ ಹೆಸರು ಪಟ್ಟಿಯಲ್ಲಿ ಉಳಿಯಬಾರದು ಎಂಬುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಸುಗಮವಾಗಿ ನಡೆಯುತ್ತಿದೆ. ಬಿಹಾರದಲ್ಲಿ ಈ ಪ್ರಕ್ರಿಯೆಯು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಸ್ಸಾಂನಲ್ಲಿ ಪ್ರತ್ಯೇಕವಾಗಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂದು ಸಿಇಸಿ ಮಾಹಿತಿ ನೀಡಿದ್ದಾರೆ.
SIR ವಿಸ್ತರಣೆ ಮತ್ತು ಬಿಹಾರದ ಯಶಸ್ಸು
ಸದ್ಯಕ್ಕೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಶೀಘ್ರದಲ್ಲೇ ಇದನ್ನು ದೇಶದ ಉಳಿದ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಸಿಇಸಿ ಹೇಳಿದ್ದಾರೆ.
ಬಿಹಾರದಲ್ಲಿ SIR ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಯ ವಿರುದ್ಧ ಒಂದೇ ಒಂದು ಮೇಲ್ಮನವಿ ಸಲ್ಲಿಕೆಯಾಗದಿರುವುದು ಈ ವ್ಯವಸ್ಥೆಯ ಪಾರದರ್ಶಕತೆಗೆ ಸಾಕ್ಷಿ ಎಂದು ಜ್ಞಾನೇಶ್ ಕುಮಾರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನದ ಬಳಕೆ - ECINet ಆಯಪ್
ಡಿಜಿಟಲ್ ಯುಗಕ್ಕೆ ತಕ್ಕಂತೆ ಮತದಾರರ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತರಲು ECINet ಆಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಚುನಾವಣಾ ಆಯೋಗದ ತಾಂತ್ರಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಯುವ ಮತದಾರರಿಗೆ ಕಿವಿಮಾತು
ಯುವಜನರು ಕೇವಲ ಮತ ಹಾಕುವುದಷ್ಟೇ ಅಲ್ಲದೆ, ಪ್ರಜಾಪ್ರಭುತ್ವದ ರಾಯಭಾರಿಗಳಾಗಿ ಇತರರಿಗೂ ಪ್ರೇರಣೆ ನೀಡಬೇಕು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಮತ್ತು ತಪ್ಪಾದ ನಿರೂಪಣೆಗಳ ವಿರುದ್ಧ ಹೋರಾಡಲು ಯುವ ಜನಾಂಗ ಮುಂಚೂಣಿಯಲ್ಲಿರಬೇಕು ಎಂದು ಜ್ಞಾನೇಶ್ ಕರೆ ನೀಡಿದ್ದಾರೆ.
ಅಂತರಾಷ್ಟ್ರೀಯ ನಾಯಕತ್ವ
ಭಾರತವು ಇತ್ತೀಚೆಗೆ International IDEA ಕೌನ್ಸಿಲ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಭಾರತದ ಚುನಾವಣಾ ನಿರ್ವಹಣಾ ವ್ಯವಸ್ಥೆಯು ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ನವೀನ ಮಾದರಿ ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಎಂದು ಸಿಇಸಿ ತಿಳಿಸಿದ್ದಾರೆ.

