ಕಾಸರಗೋಡು: ಪತ್ನಿ ಹಾಗೂ ಪತ್ನಿ ಸಹೋದರಿ ಪುತ್ರನ ಮೈಮೇಲೆ ಆ್ಯಸಿಡ್ ಎರಚಿ ಗಂಭೀರ ಗಾಯಗೊಳಿಸಿದ್ದ ಮುನ್ನಾಡ್ ಚಂಬಕ್ಕಾಡ್ ನಿವಾಸಿ ರವೀಂದ್ರನ್ ಎಂಬಾತನನ್ನು ಬೇಡಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರವೀಂದ್ರನ್ ನಿತ್ಯ ಮದ್ಯಪಾನಿಯಾಗಿದ್ದು, ಈತನ ಕಿರುಕುಳಕ್ಕೆ ಅಂಜಿ ಪತ್ನಿ ಜಾನಕಿ ಹಾಗೂ ಮಕ್ಕಳು ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದರು. ಎರಡು ದಿವಸದ ಹಿಂದೆ ಅತಿಯಾಗಿ ಮದ್ಯ ಸೇವಿಸಿ ಅಲ್ಲಿಗೂ ಅಗಮಿಸಿದ್ದ ಈತ ಪತ್ನಿ ಜಾನಕಿ ಮೇಲೆ ಆ್ಯಸಿಡ್ ಎರಚಿದ್ದಾನೆ. ಮನೆಯೊಳಗಿದ್ದ ಪುತ್ರಿಯ ಮೇಲೂ ಆ್ಯಸಿಡ್ ಎರಚಲು ಯತ್ನಿಸುತ್ತಿದ್ದಂತೆ ಆಕೆ ಮನೆಯಿಂದ ಹೊರಕ್ಕೆ ಧಾವಿಸಿ ಪರಾರಿಯಾಗಿದ್ದಳು. ಈ ಸಂದರ್ಭ ಜಾನಕಿ ಅವರ ಸಹೋದರಿ ಪುತ್ರ ಸುರೇಶ್ ಮೈಗೆ ಆ್ಯಸಿಡ್ ದಾಳಿ ನಡೆಸಿದ್ದನು. ಗಾಯಾಳುಗಳಿಬ್ಬರೂ ಕಾಸರಗೋಡಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಮನೆಗೆ ಆಗಮಿಸಿದ್ದ ಆಸುಪಾಸಿನವರ ಮೇಲೂ ರವೀಂದ್ರನ್ ಜಗಳಕ್ಕೆ ಮುಂದಾಗಿದ್ದು, ತಕ್ಷಣ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

