ಭಾರತ-ಅಮೆರಿಕ ನಡುವಿನ ಮಧ್ಯಂತರ ಒಪ್ಪಂದದ ಚೌಕಟ್ಟನ್ನು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಕೃಷಿಯ ಸಂಪೂರ್ಣ ಶರಣಾಗತಿ ಎಂದು ಬಣ್ಣಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ.
ಕೃಷಿ ಮತ್ತು ಹೈನುಗಾರಿಕೆ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಹೊರಗಿರಲಿವೆ ಎಂಬ ಸರಕಾರದ ಹೇಳಿಕೆಗೆ ಈ ವ್ಯಾಪಾರ ಒಪ್ಪಂದದ ಚೌಕಟ್ಟು ವ್ಯತಿರಿಕ್ತವಾಗಿದ್ದು, ಒಂದು ವೇಳೆ ಈ ಒಪ್ಪಂದಕ್ಕೇನಾದರೂ ಸಹಿ ಮಾಡಿದರೆ, ಸಾಮೂಹಿಕ ಅಖಿಲ ಭಾರತ ಮಟ್ಟದ ಹೋರಾಟಗಳು ನಡೆಯಲಿವೆ ಎಂದು ಸಂಘಟನೆ ಎಚ್ಚರಿಸಿದೆ.
ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸುವುದನ್ನು ಅಂತಿಮಗೊಳಿಸಲು ಶೀಘ್ರವೇ ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆ ಹೇಳಿದೆ. ಕೃಷಿ ಹಾಗೂ ಹೈನುಗಾರಿಕೆ ವಲಯಗಳನ್ನು ರಕ್ಷಿಸಲಾಗುವುದು ಎಂದು ವಾಣಿಜ್ಯ ಸಚಿವರು ಸಾರ್ವಜನಿಕವಾಗಿ ಹೇಳಿದ್ದರೂ ಭಾರತ-ಅಮೆರಿಕ ಜಂಟಿ ಹೇಳಿಕೆಗಳು ಅಮೆರಿಕ ಕೃಷಿ ಹಾಗೂ ಆಹಾರ ಉತ್ಪನ್ನಗಳ ಮೇಲೆ ಯಾವುದೇ ಸುಂಕ ವಿಧಿಸದಿರುವ ಕುರಿತು ಚರ್ಚಿಸಲು ಭಾರತ ಒಪ್ಪಿಕೊಂಡಿರುವುದನ್ನು ಸೂಚಿಸುತ್ತಿವೆ. ಭಾರತದ ಮಾರುಕಟ್ಟೆಯನ್ನು ಅಮೆರಿಕದ ಕೃಷಿ ಸರಕುಗಳಿಗೆ ಮುಕ್ತಗೊಳಿಸಿರುವುದರಿಂದ, ದೇಶೀಯ ರೈತರಿಗೆ ಗಮನಾರ್ಹ ನಷ್ಟವುಂಟಾಗಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ನಾಯಕ ಜಗ್ಜೀತ್ ಸಿಂಗ್ ದಲ್ಲೇವಾಲ್ ಎಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ಕಿಸಾನ್ ಸಭಾದ ನಾಯಕ ಕೃಷ್ಣ ಪ್ರಸಾದ್, ಒಣಗಿಸಿದ ಮದ್ಯ ತಯಾರಿಕಾ ಧಾನ್ಯಗಳು, ಪ್ರಾಣಿಗಳ ಆಹಾರವಾದ ಕೆಂಪು ಸೋರ್ಘಮ್ ಹಾಗೂ ಸೋಯಾಬೀನ್ ತೈಲವನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡುವ ಈ ಒಪ್ಪಂದದಿಂದ ಕೃಷಿ ಹಾಗೂ ಹೈನುಗಾರಿಕೆ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 12ರಂದು ನಡೆಯಲಿರುವ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಭಾರತೀಯ ಕಿಸಾನ್ ಸಂಘಟನೆಯ ನಾಯಕ ರಾಕೇಶ್ ಟಿಕಾಯತ್ ಕೂಡಾ ರೈತರಿಗೆ ಮನವಿ ಮಾಡಿದ್ದು, ಈ ಒಪ್ಪಂದದಿಂದ ಗ್ರಾಮೀಣ ಭಾಗದ ಜೀವನದ ಮೇಲೆ ಯಾವ ಬಗೆಯ ಪರಿಣಾಮವುಂಟಾಗಲಿದೆ ಎಂದು ಗ್ರಾಮೀಣ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

