ಕೊಲ್ಲಂ: ಕೇರಳದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಪಠ್ಯಕ್ರಮವನ್ನು ಶೇಕಡ 25ರಷ್ಟು ಕಡಿತಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದ್ದಾರೆ.
ಕಳೆದ ವರ್ಷ ಇಲ್ಲಿನ ತೆವಲಕ್ಕರ ಬಾಲಕರ ಪ್ರೌಢಶಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ವಿದ್ಯಾರ್ಥಿ ಮಿಥುನ್ ಕುಟುಂಬಕ್ಕೆ ನಿರ್ಮಿಸಲಾಗಿರುವ ಮನೆಯ ಕೀಲಿಯನ್ನು ಶನಿವಾರ ಹಸ್ತಾಂತರ ಮಾಡಿದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.
ಹೆಚ್ಚಿನ ಶೈಕ್ಷಣಿಕ ಹೊರೆಯ ಬಗ್ಗೆ ವಿದ್ಯಾರ್ಥಿಗಳು ಆಗಾಗ್ಗೆ ದೂರು ನೀಡುತ್ತಾರೆ. ಇದನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ ಎಂದು ಹೇಳಿದರು.
'ಈಗಿನ ಪಠ್ಯಪುಸ್ತಕಗಳಲ್ಲಿ ಇರುವ ಪಠ್ಯಕ್ರಮದಲ್ಲಿ ಶೇ 25ರಷ್ಟು ಪ್ರಮಾಣವನ್ನು ತೆಗೆಯಲಾಗುವುದು. ಆದರೆ ಪುಸ್ತಕಗಳಲ್ಲಿ ಇರುವ ವಿಷಯವನ್ನು ಬದಲಾಯಿಸುವುದಿಲ್ಲ. ಪಠ್ಯಪುಸ್ತಕ ಸಮಿತಿಯು ಈ ನಿರ್ಧಾರವನ್ನು ಅನುಮೋದಿಸಿದೆ' ಎಂದು ಮಾಹಿತಿ ನೀಡಿದರು.

