ಸಿಲ್ಚಾರ್: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮತ್ತಿಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತರದ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಇಬ್ಬರೂ ಅಸ್ಸಾಂ ಕಛಾರ್ ಜಿಲ್ಲೆಯ ಕಟಿಗೋರಾಹ್‌ನ ನಿವಾಸಿಗಳು. ಇವರು ಸಿಲ್ಚಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಎಸ್‌ಎಂಸಿಎಚ್)ಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
''ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಎಸ್‌ಎಂಸಿಎಚ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಅವರನ್ನು ರಾಮಚಂದ್ರ ಬೈಷ್ಣವ್ ಹಾಗೂ ನಿಮರುದ್ದೀನ್ ಎಂದು ಗುರುತಿಸಲಾಗಿದೆ'' ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 5ರಂದು ಈ ಘಟನೆ ಸಂಭವಿಸಿದ ಬಳಿಕ ಎಸ್‌ಎಂಸಿಎಚ್‌ನಲ್ಲಿ ಒಟ್ಟು 9 ಮಂದಿ ಗಣಿ ಕಾರ್ಮಿಕರನ್ನು ದಾಖಲು ಮಾಡಲಾಗಿದೆ.

