ಜಿನೀವಾ: ಲಿಬಿಯಾ ಕರಾವಳಿಯಲ್ಲಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 53 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸಿಗರ ಸಂಸ್ಥೆ ಸೋಮವಾರ ತಿಳಿಸಿದೆ.
ದೋಣಿ ದುರಂತದಲ್ಲಿ ಬದುಕುಳಿದ ಇಬ್ಬರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದೆ.
ಲಿಬಿಯಾದ ಜುವಾರಾ ಬಳಿ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ನೈಜೀರಿಯಾದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
'ದುರಂತದಲ್ಲಿ ಪತಿಯನ್ನು ಕಳೆದುಕೊಂಡೆ' ಎಂದು ಬದುಕುಳಿದ ಮಹಿಳೆಯೊಬ್ಬರು ತಿಳಿಸಿದರೆ, ಮತ್ತೊಬ್ಬರು 'ನನ್ನ ಮಕ್ಕಳಿಬ್ಬರು ನಾಪತ್ತೆಯಾಗಿದ್ದಾರೆ' ಎಂದಿದ್ದಾರೆ.
ಆಫ್ರಿಕಾ ಖಂಡದ ಕೆಲವು ದೇಶಗಳ ವಲಸಿಗರು ಮತ್ತು ನಿರಾಶ್ರಿತರನ್ನು ಹೊತ್ತ ದೋಣಿ ಫೆ.5ರ ರಾತ್ರಿ 11ಕ್ಕೆ ಲಿಬಿಯಾದ ಅಲ್-ಜವಿಯಾದಿಂದ ಹೊರಟಿತ್ತು. ಅಂದಾಜು ಆರು ಗಂಟೆಗಳ ಪ್ರಯಾಣದ ಬಳಿಕ ತಲೆಕೆಳಗಾಗಿ ಮುಳುಗಿತು ಎಂದು ಬದುಕುಳಿದವರು ತಿಳಿಸಿದ್ದಾರೆ.

