'ಅಮೆರಿಕದಲ್ಲಿ ಹತ್ತಿ ಮತ್ತು ಮಾನವ ನಿರ್ಮಿತ ನಾರು ಬಳಸಿ ತಯಾರಿಸುವ ಬಾಂಗ್ಲಾದೇಶದ ಕೆಲವು ಜವಳಿ ಮತ್ತು ಉಡುಪುಗಳ ಮೇಲೆ ಅಮೆರಿಕದ ಮಾರುಕಟ್ಟೆಯಲ್ಲಿ ಪರಸ್ಪರ ಶೂನ್ಯ ಸುಂಕ ಪಡೆಯುವ ಕಾರ್ಯವಿಧಾನವನ್ನು ಸ್ಥಾಪಿಸಲು ಅಮೆರಿಕ ಬದ್ಧವಾಗಿದೆ' ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಸೋಮವಾರ ತಿಳಿಸಿದ್ದಾರೆ.
ಕಳೆದ ವರ್ಷದ ಏಪ್ರಿಲ್‌ನಿಂದ 9 ತಿಂಗಳ ನಿರಂತರ ಮಾತುಕತೆಯ ನಂತರ ಈ ಒಪ್ಪಂದಕ್ಕೆ ಬರಲಾಗಿದೆ. ಇದಕ್ಕೂ ಮೊದಲು, ಬಾಂಗ್ಲಾದೇಶಕ್ಕೆ ಶೇ 37ರಷ್ಟು ಸುಂಕ ವಿಧಿಸಲಾಗಿತ್ತು. ಇದನ್ನು 2025ರ ಆಗಸ್ಟ್‌ನಲ್ಲಿ ಶೇ 20 ಕ್ಕೆ ಇಳಿಸಲಾಗಿತ್ತು. ಇದೀಗ ಈ ಸುಂಕದ ಮೇಲೆ ಶೇ 1ರಷ್ಟು ಕಡಿತಗೊಳಿಸಿ ಶೇ 19ಕ್ಕೆ ಇಳಿಸಲಾಗಿದೆ.
ಬಾಂಗ್ಲಾದ ವಾಣಿಜ್ಯ ಕಾರ್ಯದರ್ಶಿ ಮಹಬೂಬುರ್ ರೆಹಮಾನ್ ಅವರ ಪ್ರಕಾರ, ಬಾಂಗ್ಲಾದೇಶದ ಪ್ರಮುಖ ರಫ್ತಿನ ಆದಾಯದ ಮೂಲವಾಗಿರುವ ಸಿದ್ಧ ಉಡುಪುಗಳು (ರೆಡಿ ಮೇಡ್ ಬಟ್ಟೆಗಳು), ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿ ಮತ್ತು ಸಿಂಥೆಟಿಕ್ ಫೈಬರ್‌ಗಳಿಂದ ತಯಾರಿಸಲ್ಪಟ್ಟ ಸಿದ್ದ ಉತ್ಪನ್ನಗಳ ಮೇಲೆ ಪರಸ್ಪರ ಶೂನ್ಯ ಸುಂಕವನ್ನು ಪಡೆಯಲಿವೆ.
ಈ ಒಪ್ಪಂದಕ್ಕೆ ವಾಷಿಂಗ್ಟನ್ ವಾಣಿಜ್ಯ ಸಲಹೆಗಾರ ಶೇಖ್ ಬಶೀರ್ ಉದ್ದೀನ್ ಮತ್ತು ಯುಎಸ್ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಜೇಮಿಸನ್ ಗ್ರೀರ್ ಸಹಿ ಹಾಕಿದ್ದಾರೆ. ಇದರ ಜೊತೆಗೆ ಬಾಂಗ್ಲಾದೇಶವು ಅಮೆರಿಕದ ಗೋಧಿ, ಸೋಯಾಬೀನ್ ಮತ್ತು ಎಲ್‌ಎನ್‌ಜಿಯನ್ನು ಶೂನ್ಯ ಸುಂಕದಲ್ಲಿ ಆಮದು ಮಾಡಿಕೊಳ್ಳಲಿದೆ.

