ನವದೆಹಲಿ: ನೂತನವಾಗಿ ಸಿದ್ದಪಡಿಸಿರುವ ಐದು ತೇಜಸ್ ಲಘು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲು ಸಂಪೂರ್ಣ ಸಿದ್ಧವಾಗಿವೆ ಎಂದು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಗುರುವಾರ ತಿಳಿಸಿದೆ.
83 ತೇಜಸ್ Mk-1A ಜೆಟ್‌ಗಳ ಖರೀದಿಗಾಗಿ 2021ರ ಫೆಬ್ರುವರಿಯಲ್ಲಿ ರಕ್ಷಣಾ ಸಚಿವಾಲಯವು ಎಚ್‌ಎಎಲ್ ಜೊತೆ ₹48,000 ಕೋಟಿ ಒಪ್ಪಂದ ಮಾಡಿಕೊಂಡಿದೆ.
'ಐದು ವಿಮಾನಗಳು ವಿತರಣೆಗೆ ಸಂಪೂರ್ಣವಾಗಿ ಸಿದ್ಧಗೊಂಡಿವೆ. ಒಪ್ಪಿಗೆ ನೀಡಿದ ವಿಶೇಷತೆಗಳಿಗೆ ಅನುಗುಣವಾಗಿ, ಅದೇ ಸಾಮರ್ಥ್ಯದ ವಿಮಾನಗಳನ್ನು ಸಿದ್ದಪಡಿಸಲಾಗಿದೆ' ಎಂದು ಎಚ್‌ಎಎಲ್ ಏರೋಸ್ಪೇಸ್‌ನ ಮೇಜರ್ ತಿಳಿಸಿದ್ದಾರೆ .
'ಈಗಾಗಲೇ 9 ಹೆಚ್ಚುವರಿ ವಿಮಾನಗಳನ್ನು ನಿರ್ಮಿಸಿ ಹಾರಿಸಲಾಗಿದೆ. ಜಿಇಯಿಂದ ಎಂಜಿನ್‌ಗಳನ್ನು ಸ್ವೀಕರಿಸಿದ ಬಳಿಕ, ಈ ವಿಮಾನಗಳು ವಿತರಣೆಗೆ ಸಿದ್ಧಗೊಳಿಸಲಾಗುತ್ತದೆ' ಎಂದರು.
ತೇಜಸ್ ಒಂದು ಏಕ-ಎಂಜಿನ್, ಬಹು-ಪಾತ್ರದ ಯುದ್ಧ ವಿಮಾನವಾಗಿದ್ದು, ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ವಿಮಾನಗಳನ್ನು ಆದಷ್ಟು ಬೇಗ ಹಸ್ತಾಂತರಿಸಲು ಎಚ್‌ಎಎಲ್, ಭಾರತೀಯ ವಾಯುಪಡೆ ಜೊತೆ ಚರ್ಚೆ ನಡೆಸುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ .
'ಇಲ್ಲಿಯವರೆಗೆ ಜಿಇಯಿಂದ 5 ಎಂಜಿನ್‌ಗಳನ್ನು ಎಚ್‌ಎಎಲ್ ಸ್ವೀಕರಿಸಲಾಗಿದೆ. ಜಿಇಯಿಂದ ಪೂರೈಕೆಯು ಸಕಾರಾತ್ಮಕವಾಗಿದ್ದು, ಭವಿಷ್ಯದ ವಿತರಣಾ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ' ಎಂದು ಅವರು ಹೇಳಿದರು.

