ಆದರೆ, ಅದೇ ವೇಳೆ, ಉದ್ಯೋಗ ಕಡಿತ ಮತ್ತು ಆರ್ಥಿಕ ಅಸ್ಥಿರತೆಯ ದೊಡ್ಡ ಅಪಾಯವನ್ನೂ ಅದು ಒಡ್ಡಿದೆ ಎಂದು ಅವರು ಹೇಳಿದ್ದಾರೆ.
ಎಐ ಇಂಪ್ಯಾಕ್ಟ್ ಶೃಂಗ ಸಭೆಯಲ್ಲಿ ಮಾತನಾಡಿದ ಕ್ರಿಸ್ಟಲೀನಾ ಜಾರ್ಜಿಯೇವ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು, ಅದರ ನಕಾರಾತ್ಮಕ ಪರಿಣಾಮಗಳಿಗೆ ''ಸಿಹಿ ಲೇಪನ'' ಮಾಡುವುದರ ವಿರುದ್ಧ ಎಚ್ಚರಿಕೆಯನ್ನೂ ನೀಡಿದರು. ಈ ತಂತ್ರಜ್ಞಾನವನ್ನು ''ಒಳಿತಿನ ಸಾಧನ ಅಥವಾ ಕೆಡುಕಿನ ಸಾಧನ''ವಾಗಿ ನಿರ್ಮಿಸಿ ನಿಭಾಯಿಸುವ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
''ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕ ಬೆಳವಣಿಗೆಯನ್ನು ಬಹುತೇಕ ಒಂದು ಶೇಕಡದಷ್ಟು ಹೆಚ್ಚಿಸಬಹುದು. ಅಂದರೆ ಸುಮಾರು 0.8 ಶೇಕಡದಷ್ಟು. ಅಂದರೆ ಜಗತ್ತು ಕೋವಿಡ್ ಸಾಂಕ್ರಾಮಿಕಕ್ಕಿಂತ ಮೊದಲು ಬೆಳೆದಿರುವುದಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತದೆ. ಇದು ಹೆಚ್ಚಿನ ಅವಕಾಶಗಳು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತವು ಈ ವೇಗದಲ್ಲಿ ಬೆಳೆಯುವುದನ್ನು ನಾವು ನಿರೀಕ್ಷಿಸುತ್ತೇವೆ. ಆಗ ಭಾರತದ 'ವಿಕಸಿತ ಭಾರತ' ಕನಸು ಸಾಧ್ಯವಾಗುತ್ತದೆ. ''ಎಐ ಬಗ್ಗೆ ನಾನು ತುಂಬಾ ಆಶಾವಾದಿಯಾಗಿದ್ದೇನೆ. ಆದರೆ, ಅದು ಗಮನಾರ್ಹ ಪ್ರಮಾಣದಲ್ಲಿ ಅಪಾಯವನ್ನು ತರುತ್ತದೆ ಎನ್ನುವುದೂ ನನಗೆ ಗೊತ್ತು'' ಎಂದರು.
''ಮೊದಲನೆಯದಾಗಿ, ದೇಶಗಳು ಮತ್ತು ಜಗತ್ತಿನ ನ್ಯಾಯಪರತೆಯನ್ನು ಕಡಿಮೆಗೊಳಿಸುವ ಅಪಾಯದೊಂದಿಗೆ ಅದು ಬರುತ್ತಿದೆ. ಯಾಕೆಂದರೆ, ಕೆಲವೇ ದೇಶಗಳಲ್ಲಿ ಈ ತಂತ್ರಜ್ಞಾನ ಇರುತ್ತದೆ. ಈ ತಂತ್ರಜ್ಞಾನ ಇರದ ದೇಶಗಳು ಆರ್ಥಿಕ ಅಸ್ಥಿರತೆಯ ಅಪಾಯವನ್ನು ಎದುರಿಸುತ್ತಿವೆ. ಯಾಕೆಂದರೆ, ಕೃತಕ ಬುದ್ಧಿಮತ್ತೆಯು ಆರ್ಥಿಕ ಮಾರುಕಟ್ಟೆಗಳಲ್ಲಿ ದಾಂಧಲೆ ನಡೆಸಬಹುದು'' ಎಂದು ಕ್ರಿಸ್ಟೀನಾ ಹೇಳಿದರು.
40-60 ಶೇಕಡಾ ಉದ್ಯೋಗ ನಾಶ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಉದ್ಯೋಗಗಳನ್ನು ನಾಶಪಡಿಸುವ ಅಪಾಯದೊಂದಿಗೆ ಬರುತ್ತಿದೆ ಹಾಗೂ ನೂತನ ಕೃತಕ ಬುದ್ಧಿಮತ್ತೆ ಆರ್ಥಿಕತೆಯಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಜನರಿಗೆ ಹೇಗೆ ಸಹಾಯ ಮಾಡುವುದು ಎನ್ನುವ ಯೋಚನೆ ಇಲ್ಲಿಲ್ಲ ಎಂದು ಕ್ರಿಸ್ಟಲೀನಾ ಹೇಳಿದರು.
''ಈ ಅಪಾಯವು ಅಗಾಧವಾಗಿದೆ ಎನ್ನುವುದನ್ನು ನಾವು ಲೆಕ್ಕಹಾಕಿದ್ದೇವೆ. ಉದ್ಯೋಗ ಮಾರುಕಟ್ಟೆಯ ಮೇಲೆ ಕೃತಕ ಬುದ್ಧಿಮತ್ತೆಯು ಸುನಾಮಿಯಂತೆ ಎರಗುತ್ತದೆ ಎನ್ನುವುದನ್ನು ನಾವು ಬಲ್ಲೆವು. ಜಾಗತಿಕವಾಗಿ, 40 ಶೇಕಡ ಉದ್ಯೋಗಗಳ ಮೇಲೆ ಎಐ ಪರಿಣಾಮ ಬೀರುತ್ತದೆ. ಕೆಲವು ಉದ್ಯೋಗಗಳು ಸುಲಲಿತಗೊಳ್ಳುತ್ತವೆ ಮತ್ತು ಇತರ ಉದ್ಯೋಗಗಳು ಕಳೆದುಹೋಗುತ್ತವೆ. ಅಭಿವೃದ್ಧಿಶೀಲ ದೇಶಗಳಲ್ಲಿ 40 ಶೇಕಡ ಮತ್ತು ಅಭಿವೃದ್ಧಿಹೊಂದಿದ ದೇಶಗಳಲ್ಲಿ 60 ಶೇಕಡ ಉದ್ಯೋಗಗಳು ನಾಶವಾಗಲಿವೆ. ಇದು ತುಂಬಾ ಕಡಿಮೆ ಅವಧಿಯಲ್ಲಿ ಸಂಭವಿಸುತ್ತದೆ'' ಎಂದು ಕ್ರಿಸ್ಟೀನಾ ಹೇಳಿದರು.

