ರಾಂಚಿ: ರಾಂಚಿಯಲ್ಲಿ ಪತನಗೊಂಡು ಏಳು ಜನರ ಸಾವಿಗೆ ಕಾರಣವಾದ 'ಬೀಚ್‌ಕ್ರಾಫ್ಟ್' ವಿಮಾನವು 39 ವರ್ಷ ಹಳೆಯದಾಗಿತ್ತು ಹಾಗೂ ಅದು 6,600 ಗಂಟೆ ಹಾರಾಟ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳು ಆಸನಗಳ ವಿಮಾನವು ಸೋಮವಾರ ರಾತ್ರಿ ರಾಂಚಿಯಿಂದ ದಿಲ್ಲಿಗೆ ಓರ್ವ ರೋಗಿ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಒಯ್ಯುತ್ತಿದ್ದಾಗ ಜಾರ್ಖಂಡ್‌ನ ಚಾತ್ರ ಜಿಲ್ಲೆಯಲ್ಲಿ ಪತನಗೊಂಡಿತ್ತು.
ದುರಂತದಲ್ಲಿ 41 ವರ್ಷದ ರೋಗಿ, ಓರ್ವ ವೈದ್ಯ, ಓರ್ವ ವೈದ್ಯಕೀಯ ಸಿಬ್ಬಂದಿ, ಇಬ್ಬರು ಸಹಾಯಕರು, ಪೈಲಟ್ ವಿವೇಕ್ ವಿಕಾಸ್ ಭಗತ್ ಮತ್ತು ಫಸ್ಟ್ ಆಫಿಸರ್ ಸವ್ರಾಜ್‌ದೀಪ್ ಸಿಂಗ್ ಪ್ರಾಣ ಕಳೆದುಕೊಂಡಿದ್ದಾರೆ. ಪೈಲಟ್ ಭಗತ್ 1,400 ಗಂಟೆಗಳ ಹಾರಾಟ ಅನುಭವವನ್ನು ಹೊಂದಿದ್ದರೆ, ಫಸ್ಟ್ ಆಫಿಸರ್ 450 ಗಂಟೆಗಳ ಹಾರಾಟ ಅನುಭವವನ್ನು ಹೊಂದಿದ್ದಾರೆ.
''ಬೀಚ್‌ಕ್ರಾಫ್ಟ್ ಸಿ90ಎ (ಕಿಂಗ್ ಏರ್) ಅವಳಿ ಇಂಜಿನ್‌ಗಳ ವಿಮಾನವನ್ನು 1987ರಲ್ಲಿ ನಿರ್ಮಿಸಲಾಗಿತ್ತು ಹಾಗೂ ಅಪಘಾತದ ವೇಳೆಗೆ ಅದು ಸುಮಾರು 6,610 ಗಂಟೆಗಳ ಹಾರಾಟವನ್ನು ನಡೆಸಿತ್ತು'' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
''ಎರಡೂ ಇಂಜಿನ್‌ಗಳು ತಲಾ ಸುಮಾರು 2,500 ಗಂಟೆಗಳನ್ನು ಪೂರ್ತಿಗೊಳಿಸಿವೆ. ಅವರ ಹೊಸ ವಾಯುಕ್ಷಮತೆ ತಪಾಸಣೆ ಪ್ರಮಾಣಪತ್ರ (ಎಆರ್‌ಸಿ)ವನ್ನು ಜನವರಿ 21ರಂದು ನೀಡಲಾಗಿತ್ತು ಹಾಗೂ ಅದು ಒಂದು ವರ್ಷದ ವಾಯಿದೆ ಹೊಂದಿತ್ತು'' ಎಂದು ಅವರು ತಿಳಿಸಿದ್ದಾರೆ.
ವಿಮಾನವು ಸೋಮವಾರ ಸಂಜೆ 7:11ರ ಸುಮಾರಿಗೆ ರಾಂಚಿಯ ಬಿರ್ಸಾ ಮುಂಡ ವಿಮಾನ ನಿಲ್ದಾಣದಿಂದ ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. 23 ನಿಮಿಷಗಳ ಬಳಿಕ ವಿಮಾನದ ಸಂವಹನ ಮತ್ತು ರೇಡಾರ್ ಸಂಪರ್ಕ ಕಡಿತಗೊಂಡಿತು. ವಿಮಾನವು ಬಳೀಕ ಚಾತ್ರ ಜಿಲ್ಲೆಯ ಸಿಮಾರಿಯ ಸಮೀಪದ ಅರಣ್ಯ ಪ್ರದೇಶದಲ್ಲಿ ಅಪ್ಪಳಿಸಿತು.

