ಶಿಮ್ಲಾ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ 19 ವರ್ಷದ ಮೊಮ್ಮಗ ಹಾಗೂ ಬಾಬುಲಾಲ್ ಸೊರೇನ್ ಅವರ ಪುತ್ರ ವೀರ್ ಸೊರೇನ್ ಮನಾಲಿಯ ಹೋಟೆಲ್ ಕೋಣೆಯೊಂದರಲ್ಲಿ ಮಂಗಳವಾರ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಫೆಬ್ರವರಿ 22ರಂದು ತಮ್ಮ ಸ್ನೇಹಿತರೊಂದಿಗೆ ಮನಾಲಿಗೆ ಆಗಮಿಸಿದ್ದ ವೀರ್ ಸೊರೇನ್, ಮನಾಲಿ ಬಳಿಯ ಸಿಮ್ಸಾದಲ್ಲಿನ ಹೋಂ ಸ್ಟೇಯೊಂದರಲ್ಲಿ ಉಳಿದುಕೊಂಡಿದ್ದರು.
ಪೊಲೀಸರ ಪ್ರಕಾರ, ಫೆಬ್ರವರಿ 23ರಂದು ಸೊಲಾಂಗ್ ಕಣಿವೆ ಮತ್ತು ಸೆಥಾನ್ ಗ್ರಾಮಗಳಿಗೆ ಭೇಟಿ ನೀಡಿದ್ದ ವೀರ್ ಹಾಗೂ ಆತನ ಸ್ನೇಹಿತರು, ಸಂಜೆ ಹೋಂ ಸ್ಟೇಗೆ ಮರಳಿದ್ದರು ಎನ್ನಲಾಗಿದೆ.
ಫೆಬ್ರವರಿ 24ರಂದು ವೀರ್ ಸೊರೇನ್ ಹೋಂ ಸ್ಟೇಯಲ್ಲೇ ಉಳಿದುಕೊಂಡರೆ, ಆತನ ಸ್ನೇಹಿತರು ಕೋಣೆಯಿಂದ ಹೊರಗೆ ಹೋಗಿದ್ದಾರೆ. ಸ್ನೇಹಿತರು ಕೋಣೆಗೆ ಮರಳಿದಾಗ, ನನಗೆ ತುಂಬಾ ತಲೆ ನೋಯುತ್ತಿದೆ ಎಂದು ವೀರ್ ಸೊರೇನ್ ಅವರಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೀರ್ ಸೊರೇನ್ ಗೆ ಸ್ನೇಹಿತರು ಮಾತ್ರೆಗಳನ್ನು ನೀಡಿದ್ದು, ಅದಾದ ಬಳಿಕ ಆತ ನಿದ್ರೆಗೆ ಜಾರಿದ್ದಾನೆ. ರಾತ್ರಿ ಸುಮಾರು 2.30ರ ವೇಳೆಗೆ ವೀರ್ ಸೊರೇನ್ ತನ್ನ ಮಂಚದಿಂದ ನೆಲದ ಮೇಲೆ ಬಿದ್ದ ಸದ್ದನ್ನು ಆತನ ಸ್ನೇಹಿತರು ಕೇಳಿದ್ದಾರೆ. ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನ ಬಾಯಿಯ ಸುತ್ತ ನೊರೆ ಬಂದಿರುವುದನ್ನು ಅವರು ಕಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವೀರ್ ಸೊರೇನ್ ನನ್ನು ತಕ್ಷಣವೇ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ಫಲಕಾರಿಯಾಗದೆ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ, ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಮನಾಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಆದರೆ, ತೀವ್ರ ಮಾನಸಿಕ ಖಿನ್ನತೆಯ ಕಾರಣಕ್ಕೆ ಈ ಸಾವು ಸಂಭವಿಸಿರಬಹುದು ಎಂದು ಅವರು ಶಂಕಿಸಿದ್ದಾರೆ.
ಈ ನಡುವೆ, ಸುದ್ದಿ ತಿಳಿದು ವೀರ್ ಸೊರೇನ್ ಕುಟುಂಬದ ಸದಸ್ಯರು ಮನಾಲಿ ತಲುಪಿದ್ದಾರೆ. ವೀರ್ ಸೊರೇನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

