ಭಾರತದ ಮೇಲೆ ವಿಧಿಸಿದ್ದ ಶೇ. 25ರ ದಂಡದ ಸುಂಕವನ್ನು ತೆಗೆದು ಹಾಕಿರುವ ಅಮೆರಿಕದ ಆದೇಶದ ಹಿಂದೆ ಭಾರತದ ಇಂಧನ ಆಮದಿನ ಮೇಲೆ ಕಣ್ಗಾವಲು ಇಡುವ ಬೆದರಿಕೆಯನ್ನೂ ಒಡ್ಡಲಾಗಿದೆ.
ಡೊನಾಲ್ಡ್ ಟ್ರಂಪ್ ಆದೇಶದ ನಂತರ ಭಾರತದ ಉತ್ಪನ್ನಗಳ ಮೇಲಿನ ಶೇ 25ರಷ್ಟು ದಂಡ ವಿಧಿಸಿರುವುದನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ ಭಾರತ ರಷ್ಯಾದಿಂದ ಇಂಧನ ಆಮದನ್ನು ಪುನರಾರಂಭಿಸುತ್ತದೆಯೇ ಎನ್ನುವುದನ್ನು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಮೇಲ್ವಿಚಾರಣೆ ನಡೆಸಬೇಕಿದೆ ಎಂದು ವರದಿಯಾಗಿದೆ.
ಹೊಸದಿಲ್ಲಿಯ ಸ್ವತಂತ್ರ ಚಿಂತಕರ ಚಾವಡಿಯಾಗಿರುವ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಧ್ಯಕ್ಷ ಬ್ರಹ್ಮ ಚೆಲ್ಲಾನಿ ಹೇಳುವ ಪ್ರಕಾರ ಈ ಮೇಲ್ವಿಚಾರಣಾ ಆದೇಶವು ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದಲ್ಲಿನ ʼreal stingʼ (ಕುಟುಕು ) ಆಗಿರುತ್ತದೆ.
"ಈ ಒಪ್ಪಂದವು ಭಾರತದ ತೈಲ ಆಮದುಗಳನ್ನು ಪತ್ತೆಹಚ್ಚುವ ಮೂಲಕ ವಾಣಿಜ್ಯ ಕಾರ್ಯದರ್ಶಿಗೆ ಅಧಿಕೃತ ಹೊಣೆಗಾರಿಕೆಯನ್ನು ನೀಡುತ್ತದೆ. ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ಪುನರಾರಂಭಿಸಿದೆ ಎಂಬ ವಿಷಯ ಪತ್ತೆಯಾದರೆ ಅಮೆರಿಕ ಶೇ 25ರಷ್ಟು ದಂಡದ ಸುಂಕವನ್ನು ಮತ್ತೆ ಜಾರಿಗೆ ತರಬಹುದು." ಎಂದು ಅವರು ಹೇಳಿದ್ದಾರೆ.
"ಪರೋಕ್ಷವಾಗಿ" ಎನ್ನುವ ಪದವು ಬಹಳ ಮುಖ್ಯವಾಗುತ್ತದೆ. ಕಚ್ಚಾ ತೈಲ ರಷ್ಯಾದಿಂದ ಬಂದಿದೆ ಎಂದು ಅರಿವಾದಲ್ಲಿ, ಯುರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಭಾರತ ರಫ್ತು ಮಾಡುವ ಸಂಸ್ಕರಿತ ಇಂಧನಗಳಾದ ಡೀಸೆಲ್, ಜೆಟ್ ಫ್ಯೂಯೆಲ್ ಮತ್ತು ಇತರ ಉತ್ಪನ್ನಗಳ ಮೇಲೆ ಅಮೆರಿಕ ಶೇ 25ರಷ್ಟು ಸುಂಕ ವಿಧಿಸಬಹುದಾಗಿದೆ. ಡೊನಾಲ್ಡ್ ಟ್ರಂಪ್ ಸುಂಕದ ಬೆದರಿಕೆಯನ್ನು ಹಿಂತೆಗೆದುಕೊಂಡಿದ್ದರೂ, ಭಾರತ ರಷ್ಯಾದಿಂದ ತೈಲ ಖರೀದಿಸಿದಲ್ಲಿ ಸುಂಕ ದಂಡವನ್ನು ವಿಧಿಸಲು ಬಾಗಿಲು ತೆರೆಯುವಂತಹ ವ್ಯವಸ್ಥೆಯನ್ನು ಒಪ್ಪಂದದಲ್ಲಿ ಮಾಡಿಕೊಂಡಿದ್ದಾರೆ ಎಂದು ಅವರು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮ ಅವರು ಬರೆದಿದ್ದಾರೆ.
ರಷ್ಯಾದಿಂದ ತೈಲ ಆಮದು ಇಲ್ಲ ಎನ್ನುವ ಷರತ್ತು ಪರಿಣಾಮವಾಗಿ ಭಾರತವು ರಿಯಾಯಿತಿ ದರದ ರಷ್ಯಾದ ಕಚ್ಚಾ ತೈಲದ ಬದಲಿಗೆ ಮಾರುಕಟ್ಟೆ ಬೆಲೆಯ ಅಮೆರಿಕದ ತೈಲವನ್ನು ಖರೀದಿಸಬೇಕಾಗುತ್ತದೆ. ಹೀಗಾಗಿ ತೈಲ ಆಮದು ಇನ್ನಷ್ಟು ದುಬಾರಿಯಾಗಲಿದೆ ಮತ್ತು ದೂರದಿಂದ ತರಬೇಕಾಗಿ ಬಂದು ಸಾಗಾಟ ವೆಚ್ಚವೂ ಏರಲಿದೆ. ಅಂದರೆ ಭಾರತದ ತೈಲ ಆಮದು ಶುಲ್ಕವು ವರ್ಷಕ್ಕೆ 4 ಶತಕೋಟಿ ಡಾಲರ್ ನಷ್ಟು ಏರಲಿದೆ.
"ಅಮೆರಿಕದ ಉದ್ದೇಶ ಸ್ಪಷ್ಟವಾಗಿದೆ. ಭಾರತದ ಇಂಧನ ಭದ್ರತೆಯನ್ನು ತೆಗೆದು ಹಾಕುವುದು. ಮತ್ತು ಹೆಚ್ಚು ದುಬಾರಿ ಮತ್ತು ಭೌಗೋಳಿಕವಾಗಿ ದೂರವಿರುವ ಅಮೆರಿಕದ ಸಪ್ಲೈಯರ್ನಿಂದ ಇಂಧನವನ್ನು ಖರೀದಿಸುವಂತೆ ಮಾಡುವುದು" ಎಂದು ಅವರು ಹೇಳಿದ್ದಾರೆ.
ಆದರೆ ಭಾರತ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಲು ಬದ್ಧವಾಗಿದೆ ಎಂಬ ಟ್ರಂಪ್ ಆಡಳಿತದ ಹೇಳಿಕೆಯನ್ನು ಭಾರತ ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.
ಭಾರತದ ರಾಜತಾಂತ್ರಿಕ ಹೇಳಿಕೆ
ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಾರ್ಯಯೋಜನೆಗಳ ಆಧಾರದ ಮೇಲೆ ಇಂಧನ ಖರೀದಿಯನ್ನು ವೈವಿಧ್ಯಮಯಗೊಳಿಸಲಾಗುವುದು (ಅಂದರೆ ಒಬ್ಬ ವ್ಯಕ್ತಿ, ಕಂಪನಿ ಅಥವಾ ಘಟಕವು ತಮ್ಮ ಹಣವನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವ ಬದಲು ವಿವಿಧ ವಸ್ತುಗಳು, ಪೂರೈಕೆದಾರರು, ವಲಯಗಳು ಅಥವಾ ಆಸ್ತಿ ವರ್ಗಗಳಲ್ಲಿ ತಮ್ಮ ಖರೀದಿ ಶಕ್ತಿಯನ್ನು ಹರಡುವುದು) ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಇದು ಕಳೆದ ಅನೇಕ ತಿಂಗಳುಗಳಿಂದ ಅಮೆರಿಕದ ಸುಂಕದ ಬೆದರಿಕೆ ವಿರುದ್ಧ ಭಾರತ ಪ್ರಯೋಗಿಸುತ್ತಿರುವ ರಾಜತಾಂತ್ರಿಕ ಅಸ್ತ್ರವಾಗಿದೆ.
ಈ ಬಗ್ಗೆ ಮಾಧ್ಯಗಳ ಜೊತೆಗೆ ಮಾತನಾಡಿರುವ ವಾಣಿಜ್ಯ ಸಚಿವ ಪೀಯೂಶ್ ಗೋಯಲ್, "ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಉತ್ತರಿಸಲಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ವಿದೇಶಾಂಗ ವ್ಯವಹಾರ 'ರಾಜತಾಂತ್ರಿಕ ಹೇಳಿಕೆ'ಯನ್ನೇ ಪುನರುಚ್ಛರಿಸುತ್ತಿದೆ.
ಅಮೆರಿಕದ ಕಾರ್ಯಕಾರಿ ಆದೇಶ
ಆದರೆ ಅಮೆರಿಕದ ಅಧ್ಯಕ್ಷರು ತಮ್ಮ ಕಾರ್ಯಕಾರಿ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. "ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಇಂಧನ ಆಮದನ್ನು ನಿಲ್ಲಿಸಲು ಬದ್ಧವಾಗಿದೆ. ಅಮೆರಿಕದಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಇಂಧನ ಉತ್ಪನ್ನಗಳನ್ನು ಅದು ಖರೀದಿಸಲಿದೆ. ಹಾಗೆಯೇ ಮುಂದಿನ 10 ವರ್ಷಗಳವರೆಗೆ ರಕ್ಷಣಾ ಸಹಕಾರವನ್ನು ವಿಸ್ತರಿಸಲು ಒಂದು ಚೌಕಟ್ಟಿಗೆ ಬದ್ಧವಾಗಿದೆ" ಎಂದು ಅಮೆರಿಕದ ಅಧ್ಯಕ್ಷರ ಕಾರ್ಯಕಾರಿ ಆದೇಶವು ಹೇಳುತ್ತದೆ.
ಭಾರತದ ಮೇಲಿನ ಈ ಸುಂಕಗಳಿಗೆ ವ್ಲಾದಿಮಿರ್ ಪುಟಿನ್ ಅವರ ಮಾಸ್ಕೋ ಆಡಳಿತವು ಒಂದು ಕಾರಣ. ರಷ್ಯಾದ ಫೆಡರೇಶನ್ ನಿಂದ ಅಮೆರಿಕಕ್ಕೆ ಇರುವ ಬೆದರಿಕೆಯನ್ನು ಎದುರಿಸಲು ಕರ್ತವ್ಯಗಳನ್ನು ಮಾರ್ಪಡಿಸುವುದು ಎಂದು ಕಾರ್ಯಕಾರಿ ಆದೇಶದಲ್ಲಿ ಹೇಳಲಾಗಿದೆ. ಈ ಆದೇಶವು ಭಾರತ ಮತ್ತು ಅಮೆರಿಕದ ಜಂಟಿ ಹೇಳಿಕೆಯ ಘೋಷಣೆಗೆ ಭಿನ್ನವಾಗಿದೆ. ಅದರಲ್ಲಿ "ಮಧ್ಯಂತರ ಒಪ್ಪಂದಕ್ಕೆ ಚೌಕಟ್ಟು" ಎಂದು ಘೋಷಿಸಲಾಗಿದೆ.
ಭಾರತವು ನೇರವಾಗಿ ಮತ್ತು ಪರೋಕ್ಷವಾಗಿ ರಷ್ಯಾದಿಂದ ಇಂಧನ ಆಂದು ಪುನರಾರಂಭಿಸಿರುವುದು ಪತ್ತೆಯಾದಲ್ಲಿ ಶೇ 25ರಷ್ಟು ದಂಡ ಸುಂಕವನ್ನು ಮತ್ತೆ ವಿಧಿಸಲಾಗುವುದು ಎಂದು ಕಾರ್ಯಕಾರಿ ಆದೇಶ ಹೇಳುತ್ತದೆ.
ಸುಂಕದ ಬೆದರಿಕೆಯಂತಹ ಆರ್ಥಿಕ ದಬ್ಬಾಳಿಕೆ:
ಒಟ್ಟಿನಲ್ಲಿ ಉಕ್ರೇನ್ ಯುದ್ಧಕ್ಕೆ ಹಣ ಒದಗಿಸುವುದು ಎನ್ನುವ ಕಾರಣಕ್ಕೆ ರಷ್ಯಾದಿಂದ ಇಂಧನ ಖರೀದಿ ಮೇಲೆ ಭಾರತಕ್ಕೆ ಶೇ 25 ಸುಂಕ ಸೇರಿದಂತೆ ಭಾರತದ ರಫ್ತುಗಳ ಮೇಲೆ 2025 ಆಗಸ್ಟ್ನಿಂದ ಅಮೆರಿಕ ಶೇ 50ರಷ್ಟು ಸುಂಕ ಹೇರಿದೆ. ಇದೀಗ ದ್ವಿಪಕ್ಷೀಯ ಮಾತುಕತೆಯ ನಂತರ ಅಮೆರಿಕ ಶೇ 25ರಷ್ಟು ಸುಂಕವನ್ನು ಹಿಂತೆಗೆದುಕೊಂಡಿದೆ. ಜಂಟಿ ಹೇಳಿಕೆಯಲ್ಲಿ ಎರಡೂ ದೇಶಗಳು ರಷ್ಯಾದ ಹೆಸರನ್ನು ಉಲ್ಲೇಖಿಸದೆ ಇದ್ದರೂ ಭಾರತ ಅಮೆರಿಕದಿಂದ ಮುಂದಿನ ಐದು ವರ್ಷಗಳಲ್ಲಿ 500 ಶತಕೋಟಿ ಡಾಲರ್ ಇಂಧನ ಮತ್ತು ಇತರ ಉತ್ಪನ್ನಗಳ ಖರೀದಿಗೆ ಬದ್ಧವಾಗಿದೆ.
ಇಂಧನ ಸುಂಕದ ಹೆಸರಿನಲ್ಲಿ ಟ್ರಂಪ್ ಮಾಡುತ್ತಿರುವ ರಾಜಕೀಯಕ್ಕೆ ಇದು ಮತ್ತೊಂದು ಗರಿಯಾಗಿದೆ ಎಂದು ಬ್ರಹ್ಮ ಚೆಲ್ಲಾನಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಮೊದಲು ಟ್ರಂಪ್ ಜಪಾನ್ನಿಂದ 550 ಶತಕೋಟಿ ಡಾಲರ್, ದಕ್ಷಿಣ ಕೊರಿಯಾದಿಂದ 350 ಶತಕೋಟಿ ಡಾಲರ ಮತ್ತು ಮಲೇಷ್ಯಾದಿಂದ 70 ಶತಕೋಟಿ ಡಾಲರ್ನಷ್ಟು ವ್ಯಾಪಾರಿ ಬದ್ಧತೆಗಳನ್ನು ಪಡೆದಿದ್ದಾರೆ.
"ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಸರಕುಗಳ ವ್ಯಾಪಾರ 2025ರಲ್ಲಿ 132.13 ಶತಕೋಟಿ ಡಾಲರ್ಗಳಷ್ಟೇ ಇತ್ತು. ಇದೀಗ ಹೊಸ ವ್ಯಾಪಾರ ಒಪ್ಪಂದದಿಂದ ಭಾರತ ಅಮೆರಿಕದಿಂದ ವಾರ್ಷಿಕವಾಗಿ 100 ಶತಕೋಟಿ ಡಾಲರ್ ನಷ್ಟು ಹೆಚ್ಚುವರಿ ಆಮದು ಮಾಡಿಕೊಳ್ಳಬೇಕಿದೆ. ಹೀಗಾಗಿ ಅಮೆರಿಕ ಭಾರತದ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ವಿರೂಪಗೊಳಿಸಿದೆ. ರಫ್ತುವಿನಲ್ಲಿ ಏರಿಕೆ ಏನೂ ಇಲ್ಲದೆ, ಆಮದಿನಲ್ಲಿ ಏರಿಕೆಯಿಂದ ಭಾರತ 200 ಶತಕೋಟಿ ಡಾಲರ್ ನಷ್ಟು ವ್ಯಾಪಾರ ಕೊರತೆಯನ್ನು ಎದುರಿಸಲಿದೆ" ಎಂದು ಬ್ರಹ್ಮ ಚೆಲ್ಲಾನಿ ವಿಶ್ಲೇಷಿಸಿದ್ದಾರೆ.
ಕೃಪೆ: hindustantimes.com

