ಪೆರ್ಲ: ಪಾಣಾಜೆ ಸ್ವರ್ಗ ಸಮೀಪದ ತೂಂಬಡ್ಕದಲ್ಲಿ ಶುಕ್ರವಾರ ಸಂಜೆ ಚಿರತೆ ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತೂಂಬಡ್ಕ ಬಯಲಿನ ಕಲ್ಲುಕ್ವಾರೆ ಸಮೀಪ ಚಿರತೆ ಕಂಡು ಬಂದಿದೆ ಎಂದು ಮುಳಿಹುಲ್ಲು ಎರೆಯುತ್ತಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ. ಭಯಗೊಂಡ ಇವರು ಸಮೀಪದ ಮನೆಯವರಲ್ಲಿ ತಿಳಿಸಿದ್ದು, ಬಳಿಕ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಚಿರತೆಯದ್ದೆಂದು ಶಂಕಿಸುವ ಹೆಜ್ಜೆಗುರುತು ಪತ್ತೆಹಚ್ಚಲಾಗಿದೆ.
ಮಹಿಳೆ ನೀಡಿದ ಹೇಳಿಕೆಯಂತೆ ಪಾಣಾಜೆ ಅರ್ಧಮೂಲೆ ಅಥವಾ ಸ್ವರ್ಗ ಬೈರಡ್ಕ ಭಾಗಕ್ಕೆ ಚಿರತೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಆರ್ಲಪದವು ಜಾಂಬ್ರಿ ಕಾಡಿನ ಮಧ್ಯೆ ಚಿರತೆ ಪ್ರತ್ಯಕ್ಷಗೊಂಡಿರುವುದಾಗಿ ಹೇಳಲಾಗಿತ್ತು. ಇದೇ ವೇಳೆ ಟ್ಯಾಪಿಂಗ್ ಕಾರ್ಮಿಕ ಕೂಡಾ ದೊಡ್ಡದೊಂದು ಪ್ರಾಣಿ ಓಡುತ್ತಿರುವುದನ್ನು ಕಂಡಿರುವುದಾಗಿಯೂ, ಆದರೆ ಅದರ ಗುರುತು ಸರಿಯಾಗಿ ಲಭಿಸಿಲ್ಲವೆಂದು ತಿಳಿಸಿದ್ದಾರೆ. ಈ ಪ್ರದೇಶ ಜನವಾಸ ವಲಯವಾಗಿದ್ದು, ಇಲ್ಲಿ ಚಿರತೆ ಆಗಾಗ ಪತ್ತೆಯಾಗುತ್ತಿರುವುದು ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ.

.jpg)
.jpg)
.jpg)
