ಮಂಜೇಶ್ವರ: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯನ್ನು ಕೈಹಿಡಿದೆಳೆದು ಚುಂಬಿಸಲೆತ್ನಿಸಿ, ಮಾನಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಕುಂಜತ್ತೂರು ಜಲಾಲಿಯ ಮಸೀದಿ ಸಮೀಪದ ಸಣ್ಣಡ್ಕ ನಿವಾಸಿ ಸನಿಲ್ ಕುಮಾರ್ (38)ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಎಸ್. ಐ. ವೈಷ್ಣವ್ ರಾಮಚಂದ್ರನ್ ಕಾರ್ಯಾಚರಣೆ ನಡೆಸಿದ್ದಾರೆ.
ಜ. 26ರಿಂದ ಫೆ. 8ರ ಕಾಲಾವಧಿಯ ಮಧ್ಯೆ ಘಟನೆ ನಡೆದಿದೆ. ಕುಂಜತ್ತೂರಿನ ಮಾಸ್ಕೋ ಸಭಾಂಗಣ ಸನಿಹ ಜ. 26ರಂದು ತನ್ನ ಕೈಹಿಡಿದೆಳೆದು ಚುಂಬಿಸಲು ಯತ್ನಿಸಿದ್ದರೆ, ಎರಡನೇ ಬಾರಿಗೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ತರವಾಡುಮನೆಯಲ್ಲಿ ಫೆ. 8ರಂದು ಎರಡನೇ ಬಾರಿಗೆ ಇದೇ ರೀತಿಯ ಅನುಭವವುಂಟಾಗಿದೆ. ಅಲ್ಲದೆ ಬೈಕಲ್ಲಿ ಹಿಂಬಾಲಿಸಿ ಪುತ್ರನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

