ಕಾಸರಗೋಡು: ಜನಪ್ರಿಯ ಸೋಶಿಯಲ್ ಮಿಡಿಯಾ ಇನ್‍ಫ್ಲ್ಯುವೆಂಜರ್, ಮುಳ್ಳೇರಿಯ ಸನಿಹದ ಆದೂರು ನಿವಾಸಿ, ಚಿನ್ನು ಪಾಪು ಎಂದೇ ಪರಿಚಿತರಾಗಿರುವ ರೇಶ್ಮಾ(25)ಅವರ ಸಾವಿನ ಬಗ್ಗೆ ಅವರ ಮನೆಯವರು ಸಂಶಯ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ರೇಶ್ಮಾ ಮೃತದೇಹ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಿಯತ್ತಡ್ಕ ಸಮೀಪದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿತ್ತು. ಕೊಠಡಿಯೊಳಗೆ ನೇಣಿನಲ್ಲಿ ನೇತಾಡುತ್ತಿದ್ದ ರೇಶ್ಮಾ ಅವರನ್ನು ಇವರ ಸ್ನೇಹಿತಸಂದೇಶ್ ಎಂಬವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ರೇಶ್ಮಾ ಅವರ ತಂದೆ ಆದೂರು ಆಲಂತಡ್ಕ ನಿವಾಸಿ ಗಂಗಾಧರ್ ಹಾಗೂ ಸಹೋದರ ರತೀಶ್ ಅವರು ರೇಶ್ಮಾ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಶವಮಹಜರು ನಡೆಸಲಾಯಿತು.
ಕಳೆದ ಕೆಲವು ದಿವಸಗಳಿಂದ ಚಿನ್ನು ಒಂಟಿಯಾಗಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಲಕ್ಷಕ್ಕೂಹೆಚ್ಚುಮಂದಿ ಅನುಯಾಯಿಗಳನ್ನು ಹೊಂದಿರುವ ಇವರು, ಧಾರಾವಾಹಿಯಲ್ಲೂ ನಟಿಸಿದ್ದರು
ಮುಖ್ಯವಾಗಿ ತುಳು, ಕನ್ನಡ, ಮಲಯಾಳ, ಕೊಂಕಣಿ ಸೇರಿದಂತೆ ಕಾಸರಗೋಡಿನ ವಿವಿಧ ಭಾಚೆಗಳಲ್ಲಿ ಅಡುಗೆ, ಪ್ರವಾಸ ವಿಡಿಯೋಗಳೊಂದಿಗೆ ಮಿಂಚುತ್ತಿದ್ದರು. ಐದು ವರ್ಷದ ಹಿಂದೆ ಪ್ರಜ್ವಲ್ ಎಂಬತನನ್ನು ರೇಶ್ಮಾ ಪ್ರೀತಿಸಿ ವಿವಾಹವಾಗಿದ್ದು, ಈ ಸಂಬಂಧದಲ್ಲಿ ನಾಲ್ಕು ವರ್ಷ ಪ್ರಾಯದ ಪುತ್ರನಿದ್ದಾನೆ. ನಂತರ ದಾಂಪತ್ಯದಲ್ಲಿ ವಿರಸ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಇತ್ತೀಚೆಗೆ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಮಧೂರು ಸನಿಹದ ನಿವಾಸಿ ಸಂದೇಶ್ ಎಂಬವರ ಜತೆ ಸ್ನೇಹದಲ್ಲಿದ್ದರು. ಸೋಮವಾರ ಇವರ ಮೊಬೈಲ್‍ಗೆ ಕರೆ ಮಾಡಿದರೂ, ಸ್ವೀಕರಿಸದಿದ್ದಾಗ ಕೊಠಡಿಗೆ ಬಂದು ನೋಡಿದಾಗ ನೇಣಿನಲ್ಲಿ ನೇತಾಡುತ್ತಿರುವುದನ್ನು ಕಂಡು, ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಪ್ರಕರಣದ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


