ಭಾರತದಲ್ಲಿ ಡಿಜಿಟಲ್ ಗುರುತು ವ್ಯವಸ್ಥೆಗೆ ಮತ್ತೊಂದು ದೊಡ್ಡ ಆಪ್‌ಗ್ರೇಡ್ ಆಗಿ UIDAI ಹೊಸ ಆಧಾರ್ ಆ್ಯಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಆ್ಯಪ್ ಈಗ ಎಲ್ಲಾ ಆಧಾರ್ ಕಾರ್ಡ್ ಹೊಂದಿರುವ ನಾಗರಿಕರಿಗೆ ಲಭ್ಯವಿದ್ದು, ಆಧಾರ್ ಸಂಬಂಧಿತ ಸೇವೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ಮತ್ತು ಕಾಗದರಹಿತವಾಗಿ ಬಳಸಿಕೊಳ್ಳುವ ಅವಕಾಶ ನೀಡುತ್ತದೆ. ಬಳಕೆದಾರ ಸ್ನೇಹಿ ವಿನ್ಯಾಸ ಮತ್ತು ಭದ್ರತೆಗೆ ಆದ್ಯತೆ ನೀಡಿರುವುದು ಈ ಆ್ಯಪ್‌ನ ಪ್ರಮುಖ ವಿಶೇಷತೆಯಾಗಿದೆ. ಈ ಹೊಸ ಆಧಾರ್ ಆ್ಯಪ್ ವಿಶೇಷತೆ, ಪ್ರಮುಖ ವೈಶಿಷ್ಟ್ಯಗಳು ಮತ್ತು ನೋಂದಣಿಯ ಸಂಪೂರ್ಣ ಮಾಹಿತಿಯು ಇಲ್ಲಿದೆ.
UIDAI ಮಾಹಿತಿ ಪ್ರಕಾರ, ಹೊಸ ಆಧಾರ್ ಆ್ಯಪ್‌ನ ಮುಖ್ಯ ಉದ್ದೇಶ ಡಿಜಿಟಲ್ ಗುರುತಿನ ಬಳಕೆಯನ್ನು ವಿಸ್ತರಿಸುವುದಾಗಿದೆ. ನಾಗರಿಕರು ತಮ್ಮ ಆಧಾರ್ ವಿವರಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು, ಅಗತ್ಯವಿದ್ದಾಗ ಮಾತ್ರ ಆಯ್ದ ಮಾಹಿತಿಯನ್ನು ಹಂಚಿಕೊಳ್ಳಬಹುದು ಮತ್ತು ವಿವಿಧ ಸೇವೆಗಳನ್ನು ಒಂದೇ ಆ್ಯಪ್ ಮೂಲಕ ನಿರ್ವಹಿಸಬಹುದು. ಈ ಮೂಲಕ ಆಧಾರ್ ಬಳಕೆ ಇನ್ನಷ್ಟು ಸುಲಭ, ವೇಗ ಮತ್ತು ಸುರಕ್ಷಿತವಾಗಲಿದೆ.
ಹೊಸ ಆಧಾರ್ ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು
ಹೊಸ ಆಧಾರ್ ಆ್ಯಪ್ ಬಳಸಿ ಬಳಕೆದಾರರು ತಮ್ಮದು ಸೇರಿದಂತೆ ಗರಿಷ್ಠ ಐದು ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಡಿಜಿಟಲ್ ರೂಪದಲ್ಲಿ ಉಳಿಸಬಹುದು. ಮಾಸ್ಕ್ಡ್ ಆಧಾರ್ ಹಂಚಿಕೆ, ಕಿಖ ಕೋಡ್ ಸ್ಕ್ಯಾನ್ ಮೂಲಕ ತ್ವರಿತ ಪರಿಶೀಲನೆ ಮತ್ತು ಆಫ್‌ಲೈನ್ ವೆರಿಫಿಕೇಶನ್ ಸೌಲಭ್ಯಗಳು ಇದರಲ್ಲಿ ಲಭ್ಯವಿವೆ. ಇದರ ಮೂಲಕ ಆಧಾರ್ ಸಂಖ್ಯೆಯನ್ನು ಬಹಿರಂಗಪಡಿಸದೆ ಗುರುತು ದೃಢೀಕರಣ ಮಾಡಬಹುದು.
ಇದಲ್ಲದೆ, "Selective Share" ಆಯ್ಕೆಯ ಮೂಲಕ ಹೆಸರು, ಫೋಟೋ ಅಥವಾ ವಿಳಾಸದಂತಹ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲು ಅವಕಾಶ ಇದೆ. ಭದ್ರತೆಯನ್ನು ಹೆಚ್ಚಿಸಲು ಬಯೋಮೆಟ್ರಿಕ್ ಲಾಕ್ ವೈಶಿಷ್ಟ್ಯವನ್ನು ಕೂಡ ಸೇರಿಸಲಾಗಿದೆ. ಇದು ಅನಧಿಕೃತ ಬೆರಳಚ್ಚು, ಮುಖ ಅಥವಾ ಐರಿಸ್ ಸ್ಕ್ಯಾನ್‌ಗಳನ್ನು ತಡೆಯುತ್ತದೆ. ಆದರೆ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಫೋನ್ ಕಳೆದುಕೊಂಡರೆ ಆ್ಯಪ್ ಸೇವೆಗಳಿಗೆ ಪ್ರವೇಶ ಸಾಧ್ಯವಾಗದು ಎಂಬುದನ್ನು ಬಳಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು.
ಹೊಸ ಆಧಾರ್ ಆ್ಯಪ್‌ಗೆ ನೋಂದಣಿ ಮಾಡುವ ಮೊದಲು ಗಮನಿಸಬೇಕಾದುದು
ನೋಂದಣಿ ಆರಂಭಿಸುವ ಮುನ್ನ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಧಾರ್‌ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಸಕ್ರಿಯವಾಗಿರಬೇಕು. ಬೇರೆ ಸಂಖ್ಯೆಯಿಂದ ನೋಂದಣಿ ಸಾಧ್ಯವಾದರೂ, ಆಧಾರ್ ಸಂಬಂಧಿತ ಸಂಪೂರ್ಣ ಸೇವೆಗಳು ಲಭ್ಯವಾಗುವುದಿಲ್ಲ. ಉತ್ತಮ ಇಂಟರ್ನೆಟ್ ಸಂಪರ್ಕ ಇರುವ ಸ್ಥಳದಲ್ಲಿ ನೋಂದಣಿ ಮಾಡುವುದು ಉತ್ತಮ. ಜೊತೆಗೆ, ನಿಮ್ಮ ಭೌತಿಕ ಆಧಾರ್ ಕಾರ್ಡ್ ಅಥವಾ ಡಿಜಿಟಲ್ ಪ್ರತಿಯನ್ನು ಹತ್ತಿರದಲ್ಲೇ ಇಟ್ಟುಕೊಳ್ಳಿ.
ಆಧಾರ್ ಪರಿಶೀಲನೆಗಾಗಿ ಹೊಸ ಆಧಾರ್ ಆ್ಯಪ್ ಬಳಸುವುದು ಹೇಗೆ?
ಹೊಸ ಆಧಾರ್ ಆ್ಯಪ್‌ನಲ್ಲಿ ನೋಂದಣಿ ಮಾಡುವ ಸ್ಟೆಪ್-ಬೈ-ಸ್ಟೆಪ್ ವಿಧಾನ
ಮೊದಲು ಗೂಗಲ್ ಪ್ಲೇ ಸ್ಟೋರ್ (Android) ಅಥವಾ ಆಪ್ ಸ್ಟೋರ್ (iOS) ಮೂಲಕ UIDAI ಅಭಿವೃದ್ಧಿಪಡಿಸಿದ ಅಧಿಕೃತ ಆಧಾರ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ. ಆ್ಯಪ್ ತೆರೆಯುವ ಬಳಿಕ ನಿಮ್ಮ ಇಚ್ಛಿತ ಭಾಷೆಯನ್ನು ಆಯ್ಕೆ ಮಾಡಿ ಮತ್ತು ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಳ್ಳಿ.
ಮುಂದಿನ ಹಂತದಲ್ಲಿ ಹೋಮ್ ಸ್ಕ್ರೀನ್‌ನಲ್ಲಿ ಕಾಣಿಸುವ "Register Aadhaar" ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ಅದಾದ ಬಳಿಕ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಔಖಿP ಬರುತ್ತದೆ. ಔಖಿP ನಮೂದಿಸುವ ಮೂಲಕ ಸಾಧನ ಪರಿಶೀಲನೆ ಪೂರ್ಣಗೊಳ್ಳುತ್ತದೆ.
ಇದಾದ ನಂತರ ಮುಖ ದೃಢೀಕರಣ ಪ್ರಕ್ರಿಯೆ ಆರಂಭವಾಗುತ್ತದೆ. ಫೋನ್‌ನ ಮುಂಭಾಗದ ಕ್ಯಾಮೆರಾ ನಿಮ್ಮ ಮುಖವನ್ನು ಸ್ಪಷ್ಟವಾಗಿ ಸೆರೆಹಿಡಿಯುವಂತೆ ಹಿಡಿದು, ಸೂಚನೆಯಂತೆ ಎರಡು ಬಾರಿ ಕಣ್ಣು ಮಿಟುಕಿಸಬೇಕು. ಈ ಹಂತ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಆರು ಅಂಕಿಯ ಸುರಕ್ಷಿತ PIN ರಚಿಸಬೇಕು. ಈ PIN ಅನ್ನು ಪ್ರತಿಬಾರಿ ಆ್ಯಪ್ ತೆರೆಯುವಾಗ ಬಳಸಬೇಕಾಗಿರುವುದರಿಂದ ಸುರಕ್ಷಿತವಾಗಿ ನೆನಪಿಟ್ಟುಕೊಳ್ಳುವುದು ಅಗತ್ಯ.
ನೋಂದಣಿ ಪೂರ್ಣಗೊಂಡ ನಂತರ, ನೀವು ನೇರವಾಗಿ ಆ್ಯಪ್‌ನ ಹೋಮ್ ಪೇಜ್‌ಗೆ ಮರುನಿರ್ದೇಶಿತರಾಗುತ್ತೀರಿ. ಅಲ್ಲಿ ನಿಮ್ಮ ಆಧಾರ್ ವಿವರಗಳು ಲಭ್ಯವಿರುತ್ತವೆ ಮತ್ತು ವಿವಿಧ ಆಧಾರ್ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು. ಈ ಹೊಸ ಆಧಾರ್ ಆ್ಯಪ್ ಭಾರತದಲ್ಲಿ ಡಿಜಿಟಲ್ ಆಡಳಿತವನ್ನು ಇನ್ನಷ್ಟು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ಸುರಕ್ಷತೆ, ಸುಲಭ ಬಳಕೆ ಮತ್ತು ಪಾರದರ್ಶಕತೆ ಮೇಲೆ ಗಮನಹರಿಸಿರುವ ಈ ಆ್ಯಪ್, ಮುಂದಿನ ದಿನಗಳಲ್ಲಿ ಆಧಾರ್ ಸೇವೆಗಳಿಗಾಗಿ ಪ್ರಮುಖ ಡಿಜಿಟಲ್ ವೇದಿಕೆಯಾಗುವ ಸಾಧ್ಯತೆ ಇದೆ.

