ಜೆಮ್‌ಶೆಡ್‌ಪುರ: ಎನ್‌ಸಿಇಆರ್‌ಟಿ 8ನೇ ತರಗತಿ ಪಠ್ಯಪುಸ್ತಕದಲ್ಲಿ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಕುರಿತ ಅಧ್ಯಾಯದ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಈ ವಿವಾದಾತ್ಮಕ ಭಾಗ ಸಿದ್ಧಪಡಿಸಿದವರ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸಿ, ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,'ನ್ಯಾಯಾಂಗದ ಬಗ್ಗೆ ಸರ್ಕಾರಕ್ಕೆ ಅಪಾರ ಗೌರವ ಇದೆ. ಅದಕ್ಕೆ ಅಗೌರವ ತೋರುವ ಯಾವುದೇ ಉದ್ದೇಶವನ್ನೂ ಹೊಂದಿಲ್ಲ' ಎಂದು ಹೇಳಿದ್ದಾರೆ.
'ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ವಿಚಾರ ಗಮನಕ್ಕೆ ಬಂದ ತಕ್ಷಣವೇ ಪಠ್ಯಪುಸ್ತಕಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ' ಎಂದು ಹೇಳಿದ್ದಾರೆ.

