ಕುಂಬಳೆ: ಕುಂಬಳೆಯ ಹೋಟೆಲ್‌ಗಳು ಹಾಗೂ ಇತರ ಆಹಾರ ವಿತರಣಾ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ, ಪಂಚಾಯತ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳು, ಪೇಪರ್ ಗ್ಲಾಸ್, ಪ್ಲೇಟ್‌ಗಳನ್ನು ವಶಪಡಿಸಲಾಗಿದೆ. ಹೋಟೆಲ್‌ಗಳಲ್ಲಿ ಹಾಗೂ ಇತರ ಆಹಾರ ವಿತರಣಾ ಕೇಂದ್ರಗಳಲ್ಲಿ ಹಳಸಿದ ಆಹಾರ ಪದಾರ್ಥಗಳನ್ನು ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಜಂಟಿ ತಪಾಸಣೆ ನಡೆಸಲಾಗಿದೆ. ಆದರೆ ಯಾವುದೇ ಕಡೆಯಲ್ಲಿ ಈ ರೀತಿಯ ಸಾಮಗ್ರಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಹೆಚ್ಚಿನ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳಾದ ಕವರ್, ಪ್ಲೇಟ್, ಗ್ಲಾಸ್‌ಗಳನ್ನು ಪತ್ತೆಹಚ್ಚಿದ್ದು, ಅವುಗಳನ್ನು ವಶಪಡಿಸಲಾಗಿದೆ. ಶುಚಿತ್ವ ಪಾಲಿಸದೆ ಆಹಾರ ತಯಾರಿಸುವ ಸಂಸ್ಥೆಗಳು, ಹೊಗೆಸೊಪ್ಪು ನಿಷೇಧ ಬೋರ್ಡ್‌ಗಳನ್ನು ಸ್ಥಾಪಿಸದ ಸಂಸ್ಥೆಗಳು, ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸುವ ಸಂಸ್ಥೆಗಳು ಎಂಬಿವುಗಳಿಂದ ದಂಡ ವಸೂಲು ಮಾಡಲಾಯಿತು.


