ಕಾಸರಗೋಡು: ಜೊತೆಗೆ ನಿಂತಿದ್ದ ಹಳೇ ಫೋಟೋ ಬಳಸಿ, ತನ್ನನ್ನು ನಿರಂತರ ಹಿಂಬಾಲಿಸಿ ಕಿರುಕುಳ ನೀಡುತ್ತಿರುವುದಲ್ಲದೆ, ಬೇರೆ ಹುಡುಗನೊಂದಿಗೆ ವಿವಾಹ ಮಾಡಿಕೊಳ್ಳುವುದಕ್ಕೆ ಅವಕಾಶಮಾಡಿಕೊಡುವುದಿಲ್ಲ ಎಂಬುದಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಚೆರ್ವತ್ತೂರು ಕಾಡಂಕೋಡ್ ನಿವಸಿ ಶೆರಿನ್ ಮೆರ್ಷಾದ್ ಹಾಗೂ ಈತನಿಗೆ ಬೆಂಬಲವಾಗಿ ನಿಂತ ಆತನ ತಂದೆ ಶಂಸುದ್ದೀನ್ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬೇಕಲ ಪೊಲೀಸ್ ಠಾಣೆ ವ್ಯಾಫ್ತಿಯ 22ರ ಹರೆಯದ, ಪದವಿ ವಿದ್ಯಾರ್ಥಿನಿಯೊಬ್ಬಳ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಈ ಹಿಂದೆ ಮದುವೆ ಸಮಾರಂಭವೊಂದರಲ್ಲಿ ಮೆರ್ಷಾದ್ ಪರಿಚಯಗೊಂಡಿದ್ದ ಯುವತಿ, ಆತನೊಂದಿಗೆ ಫೋಟೋ ತೆಗೆಸಿಕೊಂಡಿದ್ದಳು. ನಂತರ ಈ ಫೋಟೋವನ್ನು ಮೆರ್ಷಾದ್ ಇನ್‍ಸ್ಟಾಗ್ರಾಮ್‍ನಲ್ಲಿ ಪ್ರೊಫೈಲ್ ಪಿಕ್ಚರ್ ಆಗಿ ಬಳಸಿಕೊಂಡಿದ್ದಾನೆ. ಅಲ್ಲದೆ ಕಾರಿನಲ್ಲಿ ತನ್ನನ್ನು ಹಿಂಬಾಲಿಸಿ ನಿರಂತರ ಕುರುಕುಳ ನೀಡುತ್ತಿದ್ದು, ಬೇರೆ ಯುವಕನೊಂದಿಗೆ ಮದುವೆಯಾಗದಂತೆ ತನ್ನ ಜತೆಗೆ ನಿಂತಿದ್ದ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರಮಾಡುವ ಬೆದರಿಕೆಯೊಡ್ಡಿರುವುದಾಗಿಯೂ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

