ಟೆಲ್ ಅವೀವ್ : ಭಾರತದ ಪ್ರಧಾನಿ ಮೋದಿ (PM Modi) ಈಗ ಇಸ್ರೇಲ್ ಪ್ರವಾಸ ಕೈಗೊಂಡಿದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಇಸ್ರೇಲ್ ಒಟ್ಟಾಗಿ ಸಾಗುತ್ತಿದ್ದು, ಈಗ ಒಪ್ಪಂದಗಳನ್ನ ಮಾಡಿಕೊಳ್ಳಲು ಎರಡೂ ದೇಶಗಳು ಸಿದ್ಧತೆ ನಡೆಸಿವೆ.
ಇದರ ಮಧ್ಯೆ, ಮೋದಿ ಬಂದಿಳಿದಾಗ ನಡೆದ ಒಂದು ಸ್ವಾರಸ್ಯಕರ ಘಟನೆ ವಿಡಿಯೋ ವೈರಲ್ ಆಗಿದೆ.ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ, ಅವರ ಡ್ರೆಸ್ನ ಪಾಕೆಟ್ನಲ್ಲಿ ಕೇಸರಿ ವಸ್ತ್ರ ಇತ್ತು. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೋದಿಗೆ ಆತ್ಮೀಯ ಸ್ವಾಗತ ಕೋರಿದ್ರು.
'ನಿಮ್ಮನ್ನು ನೋಡಿ ಸಂತೋಷವಾಯಿತು' ಎಂದು ನೆತನ್ಯಾಹು ಹೇಳಿದರು. ಸಾಂಪ್ರದಾಯಿಕ ಬಿಳಿ ಕುರ್ತಾ ಮತ್ತು ಪೈಜಾಮ ಮತ್ತು ತೋಳಿಲ್ಲದ ಜಾಕೆಟ್ ಧರಿಸಿದ್ದ ಮೋದಿ, ಕೇಸರಿ ಪಾಕೆಟ್ ಸ್ಕ್ವೇರ್ ಧರಿಸಿದ್ದರು. ನೆತನ್ಯಾಹು ಪಕ್ಕದಲ್ಲಿ ಅವರ ಪತ್ನಿ ಸಾರಾ ನೆತನ್ಯಾಹು ನಿಂತಿದ್ದರು,. ವಿಶೇಷ ಅಂದ್ರೆ ಸಾರಾ ಕೂಡಾ ಕೇಸರಿ ಉಡುಪನ್ನು ಧರಿಸಿದ್ದರು.
ಇಬ್ಬರ ಡ್ರೆಸ್ನ ಸಾಮ್ಯತೆ ಗಮನಿಸಿದ ನೆತನ್ಯಾಹು, ಮೋದಿಯ ಪಾಕೆಟ್ ಸ್ಕ್ವೇರ್ ಮತ್ತು ನನ್ನ ಪತ್ನಿಯ ಉಡುಪಿನ ಕಲರ್ ಒಂದೇ ಎಂದರು.'ಹೌದು, ಕೇಸರಿ' ಎಂದು ಮೋದಿ ನಗುತ್ತಾ ಉತ್ತರಿಸಿದರು. ಬಳಿಕ ಇಬ್ಬರು ನಾಯಕರು ಆತ್ಮೀಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
'ನನ್ನ ಪತ್ನಿ ಸಾರಾ ಮತ್ತು ನಾನು ಇಂದು ನಮ್ಮ ಉತ್ತಮ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಂದಿದ್ದೇವೆ' ಎಂದು ನೆತನ್ಯಾಹು ಹೇಳಿದ್ರು.
2017 ರಲ್ಲಿ ಮೋದಿಯವರ ಈ ಹಿಂದಿನ ಇಸ್ರೇಲ್ ಪ್ರವಾಸ ಮತ್ತು ಭಾರತಕ್ಕೆ ಅವರ ಸ್ವಂತ ಭೇಟಿಯ ಬಗ್ಗೆಯೂ ವಿವರಿಸಿದ್ದಾರೆ. ಇದು ಅಸಾಧಾರಣ ಸ್ನೇಹ ಎಂದು ನೆತನ್ಯಾಹು ಬಣ್ಣಿಸಿದ್ದಾರೆ.
'ಹೆಕ್ಸಗಾನ್' ಮೈತ್ರಿ ಘೋಷಿಸಿದ ನೆತನ್ಯಾಹು..!
ಸುತ್ತಲೂ ವೈರಿಗಳಿಂದಲೇ ಸುತ್ತುವರೆದಿರುವ ಮಧ್ಯಪ್ರಾಚ್ಯದ ಪುಟ್ಟ ರಾಷ್ಟ್ರ ಇಸ್ರೇಲ್, ತನ್ನ ಅಸ್ತಿತ್ವದ ಉಳಿವಿಗಾಗಿ ನಿರಂತರ ಸಂಘರ್ಷ ಮಾಡುತ್ತಲೇ ಬಂದಿದೆ. ತನಗಿರುವ ಜಾಗತಿಕ ಬೆಂಬಲವನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿರುವ ಇಸ್ರೇಲ್, ತನ್ನ ಗೆಳೆಯರ ಬಳಗದಲ್ಲಿ ಭಾರತಕ್ಕೆ ಪ್ರಾಮುಖ್ಯತೆ ನೀಡುತ್ತಿದೆ. ಅದೇ ಕಾರಣಕ್ಕೆ ಇಂದಿನಿಂದ ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸ ಆರಂಭಿಸಿದ್ದಾರೆ.
ಪ್ರಧಾನಿ ಮೋದಿ ಇಸ್ರೇಲ್ ಭೇಟಿ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ತಮ್ಮ ಹೊಸ ಹೆಕ್ಸಗಾನ್ ಮೈತ್ರಿಯನ್ನು ಘೋಷಿಸಿದ್ದು, ಈ ಮೈತ್ರಿಯಲ್ಲಿ ಭಾರತದ ಪಾತ್ರವನ್ನು ಅತ್ಯಂತ ಪ್ರಮುಖ ಎಂದು ಬಣ್ಣಿಸಿದ್ದಾರೆ.
ಏನಿದು 'ಹೆಕ್ಸಗಾನ್' ಮೈತ್ರಿ?
ಹೆಕ್ಸಗಾನ್ ಮೈತ್ರಿಯಲ್ಲಿ ಭಾರತ, ಅರಬ್ನ 1 ರಾಷ್ಟ್ರ ಇರಲಿದೆ. ಅದು ಯುಎಇ ಆಗಿರಬಹುದು ಎನ್ನಲಾಗ್ತಿದೆ ಆಫ್ರಿಕಾದ 1 ರಾಷ್ಟ್ರ ಇರುತ್ತೆ. ಅದು ಮೊರಾಕ್ಕೋ ಆಗಿರಬಹುದು. ಅಲ್ಲದೇ ಗ್ರೀಸ್ ಮತ್ತು ಸೈಪ್ರಸ್ ಸೇರಿದ 'ಹೆಕ್ಸಗಾನ್' ಮೈತ್ರಿ ರಚನೆ ಆಗಲಿದೆ. ಗ್ರೀಸ್ ಮತ್ತು ಸೈಪ್ರಸ್ಗಳು ಟರ್ಕಿಯ ಶತ್ರು ದೇಶಗಳು. ಇನ್ನು ಈ ಕೂಟದಿಂದ ಭಾರತದ ಕನಸಿಗೆ ಆರ್ಥಿಕ ಕಾರಿಡಾರ್ ಬಲ ಬರಲಿದೆ. ಭಾರತ-ಮಧ್ಯಪ್ರಾಚ್ಯ-ಯುರೋಪ್ನ್ನು ಸಂಪರ್ಕಿಸೋ ಕಾರಿಡಾರ್ ರಚಿಸಲು ಭಾರತ ಮುಂದಾಗಿದೆ. ಈ ಕೂಟದ ಸದಸ್ಯ ರಾಷ್ಟ್ರಗಳ ಸಂಪರ್ಕ ಬೆಳೆಸುವುದು, ಆರ್ಥಿಕ ಅಭಿವೃದ್ಧಿ ಹೆಚ್ಚಿಸುವ ಗುರಿಯನ್ನು ಹೆಕ್ಸಗಾನ್ ಹೊಂದಿದೆ. ಶಿಯಾ, ಸುನ್ನಿ ಉಗ್ರ ಕೂಟದ ವಿರುದ್ಧ ಹೋರಾಡುವುದು ಕೂಡಾ ಈ ಕೂಟದ ಉದ್ದೇಶ. ಹೆಕ್ಸಗಾನ್ ಮೈತ್ರಿಯಲ್ಲಿ ಭಾರತದ್ದೇ ಪ್ರಮುಖ ಪಾತ್ರ ನಿರ್ವಹಿಸೋದು ಪಕ್ಕಾ ಆಗಿದೆ.

