ಢಾಕಾ: ಶೇಖ್ ಹಸೀನಾ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವ ಬದಲು, ಅಧಿಕಾರಕ್ಕಾಗಿ ಒಳಜಗಳ ತಾರಕಕ್ಕೇರಿದೆ. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮುಹಮ್ಮದ್ ಯೂನಸ್ ನೇತೃತ್ವದ ಆಡಳಿತವನ್ನು ಅಸಂವಿಧಾನಿಕ ಎಂದು ಕರೆದ ಬೆನ್ನಲ್ಲೇ, ದೇಶದ ಪ್ರಭಾವಿ ಇಸ್ಲಾಮಿಕ್ ಪಕ್ಷ ಜಮಾತ್-ಎ-ಇಸ್ಲಾಮಿ ಅಧ್ಯಕ್ಷ ಶಫೀಕರ್ ರೆಹಮಾನ್(Shafiqur Rahman) ಅಧ್ಯಕ್ಷರ ವಿರುದ್ಧವೇ ಆಕ್ರಮಣಕಾರಿ ವಾಗ್ದಾಳಿ ನಡೆಸಿದ್ದಾರೆ.
ಅಧ್ಯಕ್ಷರ ಸ್ಫೋಟಕ ಸಂದರ್ಶನ ಮತ್ತು ಗೃಹಬಂಧನದ ಆರೋಪ
ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷ ಶಹಾಬುದ್ದೀನ್ ಅವರು ಯೂನಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ಗೃಹಬಂಧನ: ಯೂನಸ್ ಆಡಳಿತವು ನನ್ನನ್ನು ವಾಸ್ತವಿಕವಾಗಿ ಗೃಹಬಂಧನದಲ್ಲಿರಿಸಿದೆ. ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಹಲವು ಬಾರಿ ಪ್ರಯತ್ನ ನಡೆದಿದೆ ಎಂದು ಶಹಾಬುದ್ದೀನ್ ದೂರಿದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ತಡೆ: ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಲು ಕೂಡ ಸರ್ಕಾರ ನನಗೆ ಅನುಮತಿ ನೀಡುತ್ತಿಲ್ಲ ಎಂದು ಅಧ್ಯಕ್ಷರು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಸೋಲೆಮಾನಿ ಹತ್ಯೆಯ ಅಸಲಿ ರಹಸ್ಯ ಬಿಚ್ಚಿಟ್ಟ ಟ್ರಂಪ್: ಯಾರು ಈ ರೋಡ್‌ಸೈಡ್ ಬಾಂಬ್‌ಗಳ ಪಿತಾಮಹ..? Donald Trump
ಸೀಕ್ರೆಟ್ ಡೀಲ್: ಬಾಂಗ್ಲಾದೇಶ ಮತ್ತು ಅಮೆರಿಕ ನಡುವೆ ನಡೆದ ರಹಸ್ಯ ವ್ಯಾಪಾರ ಒಪ್ಪಂದದ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಬಾಂಗ್ಲಾ ಅಧ್ಯಕ್ಷರು ಆರೋಪಿಸಿದ್ದಾರೆ.
ಜಮಾತ್ ಮುಖ್ಯಸ್ಥರ ಪ್ರತಿಪ್ರಹಾರ: ಸತ್ಯ ಮರೆಮಾಚುತ್ತಿರುವ ಅಧ್ಯಕ್ಷ
ಅಧ್ಯಕ್ಷರ ಈ ಹೇಳಿಕೆಗಳಿಗೆ ಫೇಸ್‌ಬುಕ್ ಪೋಸ್ಟ್ ಮೂಲಕ ತಿರುಗೇಟು ನೀಡಿರುವ ಜಮಾತ್ ಮುಖ್ಯಸ್ಥ ಶಫೀಕರ್ ರೆಹಮಾನ್, ಆಗಸ್ಟ್ 5ರಂದು ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ನೀವೇ ದೇಶಕ್ಕೆ ತಿಳಿಸಿದ್ದಿರಿ. ಈಗ ಅವರ ರಾಜೀನಾಮೆ ಪತ್ರವೇ ಇಲ್ಲ ಎನ್ನುತ್ತಿರುವುದು ಏಕೆ? ನೀವು ಹಲವು ಸತ್ಯಗಳನ್ನು ಮರೆಮಾಚುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಹಸೀನಾ ಅವರ ರಾಜೀನಾಮೆ ಪತ್ರದ ವಿವಾದವೇ ಈಗ ಯೂನಸ್ ಸರ್ಕಾರದ ಅಸ್ತಿತ್ವಕ್ಕೆ ಸಂಕಷ್ಟ ತಂದೊಡ್ಡಿದೆ.
ಯೂನಸ್ ಮತ್ತು ಇಸ್ಲಾಮಿಸ್ಟ್‌ಗಳ ನಡುವೆ ನಂಟು..?
ಈ ಇಡೀ ಬೆಳವಣಿಗೆಯ ಹಿಂದೆ ಒಂದು ದೊಡ್ಡ ಷಡ್ಯಂತ್ರವಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ವಿದ್ಯಾರ್ಥಿ ನಾಯಕರ ಮೈತ್ರಿ: ಹಸೀನಾ ವಿರೋಧಿ ಚಳುವಳಿಯ ಮುಂದಾಳತ್ವ ವಹಿಸಿದ್ದ ವಿದ್ಯಾರ್ಥಿ ನಾಯಕರು ಈಗ 2026ರ ಚುನಾವಣೆಗಾಗಿ ಜಮಾತ್-ಎ-ಇಸ್ಲಾಮಿ ಜೊತೆ ಕೈಜೋಡಿಸಿದ್ದರು.
ಸಚಿವ ಸ್ಥಾನ: ಈ ಚಳುವಳಿಯ ಅನೇಕ ನಾಯಕರು ಮುಹಮ್ಮದ್ ಯೂನಸ್ ಸಂಪುಟದಲ್ಲಿ ಮಂತ್ರಿಗಳಾಗಿದ್ದಾರೆ.
ಸಾಂವಿಧಾನಿಕ ಅಂತ್ಯದ ಭೀತಿ: ಅಧ್ಯಕ್ಷರನ್ನು ಕೆಳಗಿಳಿಸಿ ಸಂಪೂರ್ಣವಾಗಿ ಇಸ್ಲಾಮಿಕ್ ಸಿದ್ಧಾಂತದ ಸರ್ಕಾರವನ್ನು ಸ್ಥಾಪಿಸಲು ಈ ಗುಂಪುಗಳು ಪ್ರಯತ್ನಿಸುತ್ತಿವೆ ಎಂಬ ಚರ್ಚೆ ಆರಂಭವಾಗಿದೆ.

