ನವದೆಹಲಿ: ಇತ್ತೀಚೆಗೆ ಉತ್ತರ ದಿಲ್ಲಿಯ ಭಾವನಾ ಕೈಗಾರಿಕಾ ಪ್ರದೇಶದಲ್ಲಿ 35 ವರ್ಷದ ಉದ್ಯಮಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಲಾರೆನ್ಸ್ ಬಿಷ್ಣೋಯಿ ತಂಡದ ಐವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಖಚಿತ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾದ ಪೊಲೀಸರು ರವಿವಾರ ಮುಂಜಾನೆ ಕೆಲವು ಶಂಕಿತರನ್ನು ಅಡ್ಡಗಟ್ಟಿದರು.
ಈ ಸಂದರ್ಭ ಆರೋಪಿಗಳು ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಪ್ರಯತ್ನಿಸಿದರು. ಪೊಲೀಸರು ಪ್ರತಿ ದಾಳಿ ನಡೆಸಿದರು. ಇದರಿಂದ ಗುಂಡಿನ ಕಾಳಗ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಕಾಳಗದ ಸಂದರ್ಭ ಓರ್ವ ಆರೋಪಿಯ ಕಾಲಿಗೆ ಗುಂಡಿನಿಂದ ಗಾಯವಾಯಿತು. ಆತನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಗುಂಡಿನ ಕಾಳಗ ನಡೆಯುತ್ತಿರುವಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅನಂತರ ಮತ್ತಿಬ್ಬರನ್ನು ಬಂಧಿಸಲಾಯಿತು. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 5ಕ್ಕೆ ತಲುಪಿದೆ. ಕಾರ್ಯಾಚರಣೆ ಸಂದರ್ಭ ಯಾವುದೇ ಪೊಲೀಸರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ.
ಪ್ಲಾಸ್ಟಿಕ್ ಕಣಗಳ ಉತ್ಪಾದಕ ವೈಭವ್ ಗಾಂಧಿಯನ್ನು ಡಿಎಸ್‌ಐಡಿಸಿ ಕೈಗಾರಿಕಾ ಪ್ರದೇಶದ ಸೆಕ್ಟರ್ 4ನಲ್ಲಿರುವ ಅವರ ಕಾರ್ಖಾನೆಯ ಸಮೀಪ ಫೆಬ್ರವರಿ 9ರಂದು ಅಪರಾಹ್ನ ಸುಮಾರು 12.50ಕ್ಕೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.

