ಪೆರ್ಲ: ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ಎಣ್ಮಕಜೆ ಪಂಚಾಯಿತಿಯ ಮೂರನೇ ವಾರ್ಡು ಬಾಳೆಮೂಲೆಯ ಜನತೆ, ಸುಧಾಕರ ಮಾಸ್ಟರ್ ಅವರನ್ನು ತಮ್ಮ ಜನಪ್ರತಿನಿಧಿಯನ್ನಾಗಿ ಆಯ್ಕೆಮಾಡಿ ಕಳುಹಿಸಿದ್ದರೂ, ಈ ಊರಿನ ಜನತೆಗೆ ಇಂದು ವಾರ್ಡು ಸದಸ್ಯ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಪಂಚಾಯಿತಿಯ ಮೂರನೇ ಬಾಳೆಮೂಲೆ ವಾರ್ಡಿನ ಗ್ರಾಮ ಸಭೆ ಬಾಳೆಮೂಲೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದರೂ, ಈ ಜನಪ್ರತಿನಿಧಿ ಹಾಜರಾಗದ ಕಾರಣ ಊರವರು ಸಬೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸೇರಿದಂತೆ ಇತರ ಅಧಿಕಾರಿಗಳು ಗ್ರಾಮ ಸಭೆಗೆ ತಲುಪಿದ್ದರೂ, ವಾರ್ಡು ಸದಸ್ಯನ ಅನುಪಸ್ಥಿತಿಯಲ್ಲಿ ಸಬೆ ನಡೆಸುವುದಕ್ಕೆ ಊರವರು ತಮ್ಮ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆ ರದ್ದುಗೊಳಿಸಬೇಕಾಗಿ ಬಂದಿತ್ತು.
ಆಡಳಿತ ಸಮಿತಿ ಸಭೆಗೂ ಗೈರು:
ಬಾಳೆಮೂಲೆ ವಾರ್ಡಿನಿಂದ ಗೆಲುವು ಸಾಧಿಸಿರುವ ಸುಧಾಕರ ಮಾಸ್ಟರ್, ಆಡಳಿತ ಸಮಿತಿಯ ನಾಲ್ಕು ಸಭೆಗಳಿಗೆ ಸತತ ಗೈರುಹಾಜರಾಗಿರುವುದಲ್ಲದೆ, ತನ್ನ ವಾರ್ಡಿನ ಜನತೆಗೆ ಸವಲತ್ತು ಒದಗಿಸಿಕೊಡುವ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾದ ಮಹತ್ವದ ಗ್ರಾಮ ಸಭೆಗೇ ಹಾಜರಾಗದಿರುವುದರಿಂದ ಊರಿನ ಮತದಾರರೇ ಈ ಸದಸ್ಯನ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸುಧಾಕರ ಮಾಸ್ಟರ್ ಗ್ರಾಪಂ ಸದಸ್ಯನಾಗಿ ಆಯ್ಕೆಯಾಗುತ್ತಿದ್ದಂತೆ ಇವರ ವಿರುದ್ಧ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ನಂತರದ ದಿನಗಳಲ್ಲಿ ಸುಧಾಕರ ಮಾಸ್ಟರ್ ತಲೆಮರೆಸಿಕೊಂಡಿದ್ದು, ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸದಿರುವುದಕ್ಕೆ ಅಸೌಖ್ಯದ ಕಾರಣ ನೀಡಿ,ಕರ್ನಾಟಕದಿಂದ ವೈದ್ಯರೊಬ್ಬರಿಂದ ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದಾರೆ. ಆದರೆ, ಕೇರಳದ ವೈದ್ಯರಿಂದಲೇ ಪ್ರಮಾಣ ಪತ್ರ ಸಲ್ಲಿಸುವಂತೆ ಪಂಚಾಯಿತಿ ಆಡಳಿತ ಮಂಡಳಿ ಸೂಚಿಸಿದೆ.
ಆಡಳಿತ ಸಮಿತಿಯ ಸಭೆಗೆ ಸೂಕ್ತ ಕಾರಣ ನೀಡದೆ ಸತತ ಮೂರು ಬಾರಿ ಹಾಜರಾಗದ ಜನಪ್ರತಿನಿಧಿಯ ಸದಸ್ಯತ್ವ ಅಸಿಂಧುಗೊಳಿಸುವ ಬಗ್ಗೆ ಪಂಚಾಯಿತಿರಾಜ್ ಕಾಯ್ದೆಯಲ್ಲಿ ಅವಕಾಶವಿದ್ದು, ಈ ಬಗ್ಗೆ ಆಡಳಿತ ಮಂಡಳಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಣ್ಮಕಜೆ ಗ್ರಾಮ ಪಮಚಾಐಇತಿ ಅಧ್ಯಕ್ಷೆ ಕುಸುಮಾವತಿ ತಿಳಿಸಿದ್ದಾರೆ.

