ವಾಷಿಂಗ್ಟನ್: ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಮುಂದಾಗಿರುವ ನಡುವೆಯೇ, ಪಶ್ಚಿಮ ಏಷ್ಯಾದಲ್ಲಿ ಎರಡನೇ ಯುದ್ಧ ವಿಮಾನ ವಾಹಕ ನೌಕೆಯನ್ನು ನಿಯೋಜಿಸಲು ಅಮೆರಿಕ ತಯಾರಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ಪರಮಾಣು ಯೋಜನೆ ಕುರಿತು ಅಮೆರಿಕ ಹಾಗೂ ಇರಾನ್ ಕಳೆದ ವಾರ ಮಾತುಕತೆ ಆರಂಭಿಸಿದ್ದವು.
'ಪರಮಾಣು ಒಪ್ಪಂದ'ವನ್ನು ಮಾಡಿಕೊಳ್ಳದೇ ಹೋದರೆ ಆಘಾತಕಾರಿ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಟ್ರಂಪ್, ಇರಾನ್‌ಗೆ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧ ವಿಮಾನ ವಾಹಕ ನೌಕೆ ಹಾಗೂ ಇತರ ಯುದ್ಧ ನೌಕೆಗಳನ್ನು ಅಮೆರಿಕವು ಕಳೆದ ತಿಂಗಳು ಪಶ್ಚಿಮ ಏಷ್ಯಾಕ್ಕೆ ಕಳುಹಿಸಿತ್ತು. ಇದೀಗ ಯುಎಸ್‌ಎಸ್ ಜೆರಾಲ್ಡ್ ಆರ್.ಫೋರ್ಡ್ ಯುದ್ಧ ವಿಮಾನ ವಾಹಕ ನೌಕೆ ಹಾಗೂ ಅದರ ಬೆಂಗಾವಲು ನೌಕೆಗಳನ್ನು ಪಶ್ಚಿಮ ಏಷ್ಯಾಕ್ಕೆ ಕಳುಹಿಸಲು ನಿರ್ಧರಿಸಿದೆ. ಸದ್ಯ ಈ ಯುದ್ಧನೌಕೆಗಳು ಕೆರಿಬಿಯನ್ ಸಮುದ್ರದಲ್ಲಿದ್ದು, ಅಧಿಕಾರಿಗಳ ಆದೇಶದ ಬಳಿಕ ಪಶ್ಚಿಮ ಏಷ್ಯಾಕ್ಕೆ ತೆರಳಲಿವೆ ಎನ್ನಲಾಗಿದೆ.

