ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೀಗ 25 ವರ್ಷ. ತಿಳಿ ಗುಲಾಬಿ ಬಣ್ಣದ ದುಪಟ್ಟಾವನ್ನು ಸರಿಪಡಿಸಿಕೊಂಡ ಆಕೆ ತನ್ನ ಮುಖ ಮುಚ್ಚಿಕೊಳ್ಳಲು ನಿರಾಕರಿಸಿದರು. ಉನ್ನಾವೊ ಅತ್ಯಾಚಾರ ಸಂತ್ರಸ್ತೆಯಾಗಿರುವ ಎಸ್ ಅವರಿಗೆ (ಇಲ್ಲಿ ಆಕೆಯ ಹೆಸರನ್ನು S ಎಂದು ಬಳಸಲಾಗಿದೆ ), ಗೌಪ್ಯತೆ ಈಗ ಕನಿಷ್ಠ ಆದ್ಯತೆಯಾಗಿದೆ.
ದೆಹಲಿಯ ನಿಜಾಮುದ್ದೀನ್ ಪೂರ್ವದಲ್ಲಿರುವ ತನ್ನ ವಕೀಲರ ಕಚೇರಿಯೊಳಗೆ ಆಕೆ 'ದಿ ಪ್ರಿಂಟ್' ಜತೆಗೆ ಮಾತನಾಡಿದ್ದಾರೆ. ಇಷ್ಟೆಲ್ಲ ಆದ ಮೇಲೆ ಮುಖವನ್ನು ಮಸುಕುಗೊಳಿಸುವ ಮೂಲಕ ಗುರುತನ್ನು ಮರೆಮಾಡುವ ಅಗತ್ಯವಿಲ್ಲ. ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನಾನು ನನ್ನ ಮರ್ಯಾದೆಯನ್ನು ಕಳೆದುಕೊಂಡೆ. ಮುಖವನ್ನು ತೋರಿಸುವುದು, ತೋರಿಸದೇ ಇರುವುದು ಇದ್ಯಾವುದನ್ನೂ ಬದಲಾಯಿಸುವುದಿಲ್ಲ. ಎಂಟು ವರ್ಷಗಳಲ್ಲಿ 100 ಕ್ಕೂ ಹೆಚ್ಚು ಬಾರಿ ನ್ಯಾಯಾಲಯಗಳಿಗೆ ಭೇಟಿ ನೀಡಿದ್ದೇನೆ ಎಂದು ಆಕೆ ಹೇಳಿದ್ದಾರೆ.
ಆಕೆ ದಣಿದಿರುವುದು ಗೊತ್ತಾಗುತ್ತದೆ. ಆದರೆ ಹದಿಹರೆಯದವಳಿದ್ದಾಗ ಆಕೆ ಮೇಲೆ ಅತ್ಯಾಚಾರ ಎಸಗಿದ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಬೆಂಬಲಿಗರು ಮಾಡುತ್ತಿರುವ ನಿರಂತರ ಅವಮಾನಗಳು ಮತ್ತು ಆರೋಪಗಳ ಮುಂದೆ ಸೋಲೊಪ್ಪಲು ಆಕೆ ತಯಾರಿಲ್ಲ. ಆರೋಪ ಮತ್ತು ಸೆಂಗಾರ್ ಅವರ ಶಿಕ್ಷೆಯ ನಡುವಿನ ವರ್ಷಗಳಲ್ಲಿ ಈ ಪ್ರಕರಣವು ಆಕೆಯ ಬದುಕನ್ನೇ ಬದಲಾಯಿಸಿದೆ. ಹಲ್ಲೆ, ಬೆದರಿಕೆಗಳು, ನ್ಯಾಯಾಲಯದ ವಿಚಾರಣೆ, ಬಹಿಷ್ಕಾರ, ಪ್ರತಿಭಟನೆಗಳು, ಪ್ರತಿವಾದ, ಟಿವಿ ಸುದ್ದಿ ಸಂದರ್ಶನಗಳು, ನ್ಯಾಯಾಲಯ ಕೊಠಡಿಗಳು, ವಕೀಲರು, ನ್ಯಾಯಾಧೀಶರು - ಕಳೆದ ದಶಕದಲ್ಲಿ ಇದೆಲ್ಲವನ್ನೂ ಆಕೆ ನೋಡಿದ್ದಾರೆ, ಅನುಭವಿಸಿದ್ದಾರೆ.
"ಎಸ್" ತಾನು ಎದುರಿಸಿದ ಸಂಕಷ್ಟಗಳ ಹೊರತಾಗಿಯೂ ಜೀವನವನ್ನು ಪುನರ್ನಿರ್ಮಿಸಿಕೊಂಡಿದ್ದಾರೆ. ಆಕೆ ಈಗ ತಾಯಿ. ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಓದುತ್ತಿರುವ ಈಕೆ ಮುಂದೆ ಕಾನೂನು ಅಧ್ಯಯನ ಮಾಡಿ ವಕೀಲಳಾಗಬೇಕು. ತನ್ನದೇ ಆದ ಕಾನೂನು ಹೋರಾಟದ ಅಂತಿಮ ಹಂತಗಳನ್ನು ವೈಯಕ್ತಿಕವಾಗಿ ನಿಭಾಯಿಸಬೇಕು. ಅಷ್ಟೇ ಅಲ್ಲ, ಆರಂಭಿಕ ಮುಖ್ಯಾಂಶಗಳು ಕಣ್ಮರೆಯಾದ ನಂತರ ಸಾರ್ವಜನಿಕರು ಮತ್ತು ಮಾಧ್ಯಮಗಳು ಮರೆತು ಬಿಡುವ ಇತರ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯರಿಗೆ ಸಹಾಯ ಮಾಡಲು ಆಕೆ ಬಯಸುತ್ತಾರೆ. ನ್ಯಾಯಾಲಯದಲ್ಲಿ ಪ್ರಕರಣವನ್ನು ಗೆಲ್ಲುವುದು ನ್ಯಾಯದ ಒಂದು ಭಾಗ ಮಾತ್ರ. ಹೋರಾಟವು ನ್ಯಾಯಾಲಯದ ಕೊಠಡಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಆಕೆ ಜೀವನಾನುಭವದಿಂದ ಅರಿತುಕೊಂಡಿದ್ದಾರೆ
ಆಘಾತವು ದೇಹಕ್ಕೆ ಮಾತ್ರ ಆಗಿರುವುದಿಲ್ಲ. ಇದು ಸ್ವಯಂ ಪ್ರಜ್ಞೆಯನ್ನೂ ಮಂಕಾಗಿಸುತ್ತದೆ. ಇದು ಒಬ್ಬ ವ್ಯಕ್ತಿಯನ್ನು ದೈಹಿಕವಾಗಿಯೂ, ಭಾವನಾತ್ಮಕವಾಗಿಯೂ ಕುಗ್ಗಿಸಿಬಿಡುತ್ತದೆ. ಇದು ಅವರ ಭಾವನೆಗಳನ್ನು ನಿಭಾಯಿಸಲು ಅಥವಾ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದುಕೊಳ್ಳಲು ಕಷ್ಟವಾಗಿಸುತ್ತದೆ. ಅವಮಾನವು ತಮಗೆ ಅಲ್ಲ, ತಮ್ಮನ್ನು ನೋಯಿಸಿದ ವ್ಯಕ್ತಿಗೆ ಅವಮಾನ ಆಗಬೇಕು ಎಂದು ಸಂತ್ರಸ್ತರಿಗೆ ಗೊತ್ತಿರುತ್ತದೆ. ಆದರೂ ಅವರು ಆ ಹೊರೆಯನ್ನು ಹೊತ್ತು ಬದುಕಬೇಕಾಗುತ್ತದೆ ಅಂತಾರೆ ಮನಶ್ಶಾಸ್ತ್ರಜ್ಞೆ ನೀತು ಸರಿನ್.
*ಮನೆ ಮತ್ತು ಕೋರ್ಟ್ ನಡುವಿನ ಓಡಾಟದ ಬದುಕು *
2019 ರಲ್ಲಿ ಎಸ್ ಅವರು ದಿಲ್ಲಿಗೆ ಸ್ಥಳಾಂತರಗೊಂಡರು. ಸುರಕ್ಷತೆ ಮತ್ತು ಭದ್ರತಾ ಕಾರಣಗಳಿಂದಾಗಿ, ಸರ್ಕಾರವು ಅವರಿಗೆ ದಿಲ್ಲಿಯಲ್ಲಿ ಮನೆಯೊಂದನ್ನು ನೀಡಿತ್ತು. ಉನ್ನಾವೊದ ತೆರೆದ ಮೈದಾನಗಳಿಂದ ದೂರದಲ್ಲಿರುವ ನೈಋತ್ಯ ದಿಲ್ಲಿಯ ಘಿಟೋರ್ನಿಯ ದಟ್ಟವಾದ ಲೇನ್‌ಗಳು ಅವರ ಹೊಸ ನೆರೆಹೊರೆಯಾಗಿವೆ. ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಇವರಿಗೆ ಕಾವಲಾಗಿದ್ದಾರೆ. ತನ್ನ ಇಬ್ಬರು ಮಕ್ಕಳೊಂದಿಗೆ ಎಸ್ ಇಲ್ಲಿ ವಾಸಿಸುತ್ತಿದ್ದಾರೆ.
ದಿಲ್ಲಿಗೆ ಬಂದಾಗಿನಿಂದ ಅವರು ನ್ಯಾಯಾಲಯಕ್ಕೆ ಓಡಾಡುವುದೇ ಆಗಿದೆ. ದಿನಚರಿ ಹೇಗಿದೆ ಎಂದು ಕೇಳಿದರೆ ಅದನ್ನು ಎರಡಾಗಿ ವಿಂಗಡಿಸಬಹುದು. ಒಂದು ಕೋರ್ಟ್ ಗೆ ಹೋಗುವ ದಿನ, ಮತ್ತೊಂದು ಕೋರ್ಟ್ ಗೆ ಹೋಗದೇ ಇರುವ ದಿನ.
2019 ಡಿಸೆಂಬರ್ ನಲ್ಲಿ ದೆಹಲಿ ನ್ಯಾಯಾಲಯವು ಸೆಂಗಾರ್ ಗೆ ಅತ್ಯಾಚಾರದ ಆರೋಪ ಹೊರಿಸಿ ಜೀವಾವಧಿ ಶಿಕ್ಷೆ ವಿಧಿಸಿತು. 2025 ಡಿಸೆಂಬರ್ 23,ರಂದು ದೆಹಲಿ ಹೈಕೋರ್ಟ್ ಪೀಠವು ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಷರತ್ತುಬದ್ಧ ಜಾಮೀನು ನೀಡಿತು. ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿ ನ್ಯಾಯಾಲಯದ ಮುಂದಿದೆ. ಡಿಸೆಂಬರ್ ನಲ್ಲಿ ದೆಹಲಿ ಹೈಕೋರ್ಟ್ ನೀಡಿದ ಆದೇಶವು ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುತ್ತದೆ. ಆದರೆ ಶಿಕ್ಷೆಯನ್ನು ರದ್ದುಗೊಳಿಸುವುದಿಲ್ಲ. ನ್ಯಾಯಾಲಯವು ಜಾಮೀನಿಗೆ ಕಠಿಣ ಷರತ್ತುಗಳನ್ನು ವಿಧಿಸಿದೆ.
ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕೆ ಸೆಂಗಾರ್ ನ ಸಹೋದರನಿಗೂ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ವಿಚಾರಣೆಯ ದಿನದಂದು, ಎಸ್ ಬೆಳಿಗ್ಗೆ 4 ಗಂಟೆಗೆ ಏಳುತ್ತಾರೆ. ಸಿಆರ್‌ಪಿಎಫ್ ಬೆಂಗಾವಲು ಪಡೆಯನ್ನು ಕರೆಯುವ ಮೊದಲು ಆಕೆ ನಾಲ್ವರಿರುವ ತನ್ನ ಕುಟುಂಬಕ್ಕೆ ಅಡುಗೆ ಮಾಡಿ ಬಡಿಸುತ್ತಾರೆ,ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಬೆಳಗ್ಗೆ ಕಾರಿನಲ್ಲಿ ನ್ಯಾಯಾಲಯಕ್ಕೆ ಹೋಗುವಾಗ ಸಾಮಾನ್ಯವಾಗಿ ಇಬ್ಬರು ಅಥವಾ ಮೂವರು ವಕೀಲರು ಆಕೆಯ ಜತೆಗಿರುತ್ತಾರೆ. ಸರ್ಕಾರ ಆಕೆಗೆ ಕಾರು ಮತ್ತು ಭದ್ರತೆಯನ್ನೂ ಒದಗಿಸಿದೆ.
ದೆಹಲಿ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ, ಸೆಂಗಾರ್ ಪರವಾಗಿ ವಾದಿಸಲು 10-12 ವಕೀಲರ ತಂಡ ಹಾಜರಿದ್ದರು. ಮತ್ತೊಂದೆಡೆ, ಸಂತ್ರಸ್ತೆ ತಮ್ಮ ವಕೀಲ ಮಹಮೂದ್ ಪ್ರಾಚಾ ಅವರ ಇಬ್ಬರು ಕಿರಿಯ ವಕೀಲರ ಜೊತೆಗಿದ್ದರು.
ಮೊದಲು ಅದೆಲ್ಲ ಬೆದರಿಸುವಂತೆ ಅನಿಸುತ್ತಿತ್ತು. ಈಗ ಇದು ದಿನಚರಿಯಂತೆ ಅನಿಸುತ್ತಿದೆ. ನಾನು ಹೆದರಿಕೊಂಡು ಹೋಗಲು ಬಂದಿಲ್ಲ. ನಾನು ಹೋರಾಡಲು ಇಲ್ಲಿದ್ದೇನೆ. ನಾನು ಇಲ್ಲಿಂದ ಹಿಂದೆ ಸರಿಯುವುದಿಲ್ಲ ಅಂತಾರೆ ಆಕೆ.
ಆಕೆ ತಿಂಗಳು ಪೂರ್ತಿ ಬ್ಯುಸಿಯಾಗಿದ್ದಾರೆ. ಹೈಕೋರ್ಟ್‌ನಲ್ಲಿ ವಿಚಾರಣೆ, ನಂತರ ಸಾಕೇತ್ ನ್ಯಾಯಾಲಯದಲ್ಲಿ, ನಂತರ ಸುಪ್ರೀಂ ಕೋರ್ಟ್‌ನಲ್ಲಿ, ನಂತರ ಸಿಬಿಐ ನ್ಯಾಯಾಲಯದಲ್ಲಿ ಹೀಗೆ ವಿಚಾರಣೆಗಳಿಗೆ ಹಾಜರಾಗಬೇಕು. ಕೆಲವು ದಿನಗಳಲ್ಲಿ, ವಿಚಾರಣೆಗಳನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗುತ್ತದೆ. ಇತರ ದಿನಗಳಲ್ಲಿ ನ್ಯಾಯಾಲಯದ ಹೊರಗೆ ಬೆಂಚಿನಲ್ಲಿ ಕೆಲವೊಮ್ಮೆ ದೆಹಲಿ ಹೈಕೋರ್ಟ್ ಆವರಣದೊಳಗಿನ ಮರದ ಕೆಳಗೆ ಕುಳಿತು ಆಕೆ ಕಾಯುತ್ತಾ, ದಿನ ಕಳೆದುಹೋಗುವುದನ್ನು ಎಣಿಸುತ್ತಾರೆ
ಸಂಜೆಯ ಹೊತ್ತಿಗೆ ಆಕೆ ತನ್ನ ವಕೀಲ ಮೆಹಮೂದ್ ಪ್ರಾಚಾ ಬಳಿಗೆ ಹೋಗುತ್ತಾರೆ. ಅವರು ನ್ಯಾಯಾಲಯದ ಕಾನೂನು ಪರಿಭಾಷೆಯನ್ನು ಅವಳಿಗೆ ವಿವರಿಸುತ್ತಾರೆ. ಇಂಗ್ಲಿಷ್‌ನಲ್ಲಿರುವುದನ್ನು ಅವರು ನನಗೆ ಅದನ್ನು ವಿವರಿಸಿದಾಗ ನನ್ನ ಪ್ರಕರಣದಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುತ್ತದೆ ಅಂತಾರೆ ಎಸ್.
ನ್ಯಾಯಾಲಯಕ್ಕೆ ಹೋಗಲು ಇಲ್ಲದ ದಿನ ಆಕೆಯ ಮನೆ ಕ್ಲಾಸ್ ರೂಂ ಆಗಿ ಬದಲಾಗುತ್ತದೆ. 2022 ರಲ್ಲಿ ಈಕೆ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ (ದ್ವಿತೀಯ ಪಿಯುಸಿ) ಶೇಕಡಾ 89 ಅಂಕಗಳನ್ನು ಗಳಿಸಿದ್ದರು. ಒಂದು ವರ್ಷದ ನಂತರ ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್‌ನಲ್ಲಿ ಬಿಎ ಪ್ರೋಗ್ರಾಂ ಕೋರ್ಸ್‌ಗೆ ಸೇರಿಕೊಂಡಿದ್ದು ಇತಿಹಾಸ, ಸಾಹಿತ್ಯ, ಪರಿಸರ ವಿಜ್ಞಾನ ಮತ್ತು ಅರ್ಥಶಾಸ್ತ್ರ ಓದುತ್ತಿದ್ದಾರೆ. ಪಠ್ಯಪುಸ್ತಕಗಳಲ್ಲಿರುವುದು ಅರ್ಥವಾಗುತ್ತಿಲ್ಲ ಎಂದಾಗ ಈಕೆ ಹಿಂದಿಯಲ್ಲಿ YouTube ಟ್ಯುಟೋರಿಯಲ್ ಗಳನ್ನು ನೋಡಿ ಕಲಿಯುತ್ತಾರೆ.
"ನಾನು 18 ವರ್ಷದವಳಿದ್ದಾಗ ಇದನ್ನೆಲ್ಲ ಕಲಿಯಬೇಕಾಗಿತ್ತು .ಆ ಘಟನೆಯಿಂದಾಗಿ ನನಗೆ ಅದು ಸಾಧ್ಯವಾಗಲಿಲ್ಲ. ಆದರೆ ಈಗಲೂ ತಡವಾಗಿಲ್ಲ ಎಂದು ನನಗೆ ಅನಿಸುತ್ತದೆ. ಕಹಿನ್ ತೋ ಶುರುವಾತ್ ಹುಯಿ (ಎಲ್ಲಿಂದಾದರೂ ಶುರುವಾಯ್ತಲ್ಲ)ಅಂತಾರಿವರು.
ಕಲಿಕೆಯನ್ನು ಪುನರಾರಂಭಿಸುವುದು ಸುಲಭವಲ್ಲ. ಅವಳು ಆಗಾಗ್ಗೆ ಪಾಠಗಳನ್ನು ಮರೆತುಬಿಡುತ್ತಾಳೆ. ಕೆಲವೊಮ್ಮೆ, ಅವಳು ತನ್ನ ಮಕ್ಕಳಿಗೆ ತಿಂಡಿ ಕೊಟ್ಟಳೋ ಅಥವಾ ತನ್ನ ಕೆಲಸವನ್ನು ಮುಗಿಸಿದ್ದಾಳೋ ಎಂಬ ಸಣ್ಣ ವಿವರಗಳನ್ನು ಕೂಡಾ ಮರೆತುಬಿಡುತ್ತಾಳೆ. ಆಘಾತಕ್ಕೊಳಗಾದವರಿಗೆ ಬಳಲಿಕೆ ಇದ್ದೇ ಇರುತ್ತದೆ. ಇದು ಸೂಕ್ತ ಸಮಯದಲ್ಲಿ ಸೂಕ್ತವಾದ ಭಾವನೆಗಳನ್ನು ಅನುಭವಿಸುವ ಸಾಮರ್ಥ್ಯವನ್ನು ಹಾನಿಗೊಳಿಸುತ್ತದೆ. ನೆನಪಿನ ಶಕ್ತಿಯ ಕೊರತೆಯೂ ಇರುತ್ತದೆ ಎಂದು ಸರಿನ್ ಹೇಳಿದ್ದಾರೆ .
ನ್ಯಾಯಾಲಯದ ವಿಚಾರಣೆ, ತರಗತಿಗಳು ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುವ ನಡುವೆ ತನ್ನ ಪ್ರಕರಣದ ಬಗ್ಗೆ ವಾಟ್ಸಾಪ್ ನಲ್ಲಿ ತಿಳಿದುಕೊಂಡು ಇತ್ತೀಚಿನ ನ್ಯಾಯಾಲಯದ ವಿಚಾರಣೆಯ ಬಗ್ಗೆ ಸಂಬಂಧಿಕರಿಗೆ ಆಕೆ ಅಪ್ಡೇಟ್ ನೀಡುತ್ತಾರೆ.
ಕವಿತೆಗಳು, ಪುಸ್ತಕಗಳು, ಕಥೆಗಳನ್ನು ಓದಲು ಅಥವಾ ತನ್ನ ನೆಚ್ಚಿನ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಿನಿಮಾ ವೀಕ್ಷಿಸಲು ತನಗೆ ಹೆಚ್ಚಿನ ಸಮಯ ಸಿಗಬೇಕೆಂದು ಬಯಸುತ್ತಾರೆ ಎಸ್.
ಮರೆಯುವುದಿಲ್ಲ
ಪ್ರತಿದಿನ ಬೆಳಿಗ್ಗೆ ಸುದ್ದಿಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಮುಖ್ಯಾಂಶಗಳು ಆಕೆಗೆ ಪರಿಚಿತವೆನಿಸುತ್ತದೆ. ಚಿಕ್ಕ ಮಕ್ಕಳು, ಹದಿಹರೆಯದವರು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸುದ್ದಿಗಳೇ ಅದರಲ್ಲಿ ತುಂಬಿರುತ್ತವೆ. ಅನೇಕರು ಹತ್ಯೆಗೀಡಾಗುತ್ತಾರೆ. ಇಲ್ಲಿ ಬದುಕುಳಿದವರು ನ್ಯಾಯಕ್ಕಾಗಿ ಹಲವಾರು ವರ್ಷ ಕಾನೂನು ಹೋರಾಟ ನಡೆಸಬೇಕಾಗುತ್ತದೆ.
"2017 ರಿಂದ ಇಲ್ಲಿಯವರೆಗೆ. ಏನೂ ಬದಲಾಗಿಲ್ಲ"
ಉನ್ನಾವೊ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಎಂದರೆ ಭಯ, ಬೆದರಿಕೆಗಳು ಮತ್ತು ಮೌನದಲ್ಲೇ ಬದುಕುವುದು. ಈಕೆಯೂ ಬೆದರಿಕೆ, ನಷ್ಟ ಮತ್ತು ಗಂಭೀರ ಆಘಾತವನ್ನು ಅನುಭವಿಸಿದ್ದಾರೆ.
ಹಾಗೆ ಬದುಕುಳಿದಿದ್ದೇ ತನ್ನನ್ನು ಇಂದಿನ ಸ್ಥಿತಿಗೆ ತಳ್ಳಿತು ಅಂತಾರೆ ಎಸ್.
ಮೊದಲು ಟಿವಿ ಕ್ಯಾಮೆರಾಗಳ ಮುಂದೆ ನಿಂತಾಗ ಅವರು ಕೇಳುವ ಪ್ರಶ್ನೆಗಳು,ಹೇಳಿಕೆಗಳು, ಸತ್ಯವನ್ನು ಮಾತನಾಡುವ ಬಗ್ಗೆ ಭಯವಾಗುತ್ತಿತ್ತು. ಆದರೆ ನನ್ನ ಮರ್ಯಾದೆ ಹೋದ ಕಾರಣ ನಾನು ಮಾತನಾಡಲೇ ಬೇಕಾಯಿತು.
ಆಕೆ ಪದೇ ಪದೇ ಮರ್ಯಾದೆ ಹೋಗಿದೆ ಎಂಬ ವಾಕ್ಯವನ್ನು ಬಳಸಿದಾಗ ಆಕೆಯ ಸುತ್ತಲಿದ್ದ ಇತರರು 'ಅದು ಹಾಗಲ್ಲ, ಹಾಗೆ ಹೇಳುವುದು ಸರಿಯಲ್ಲ' ಅಂತಾರೆ.
ನಾನು ಉನ್ನಾವೊದ ಮಗಳು ಮಾತ್ರವಲ್ಲ, ಭಾರತದ ಮಗಳು ಕೂಡ. ಆದರೆ ನನಗೆ ಆ ರೀತಿಯ ಭಾವನೆ ಅನುಭವಕ್ಕೆ ಬಂದೇ ಇಲ್ಲ.ರಾಜಕಾರಣಿಗಳು ನನಗೆ ಬೆಂಬಲ ನೀಡಲಿಲ್ಲ, ಮಹಿಳಾ ವಕೀಲರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಪೊಲೀಸ್ ಅಧಿಕಾರಿಗಳು ಸಕಾಲದಲ್ಲಿ ಕಾರ್ಯನಿರ್ವಹಿಸಲಿಲ್ಲ. ಉನ್ನಾವೊದ ಜನರು ನನ್ನನ್ನು ಪ್ರಶ್ನಿಸಿದರು, ನನ್ನಲ್ಲಿ ಸಾಕ್ಷ್ಯಗಳನ್ನು ಕೇಳಿದರೇ ಹೊರತು ಸೆಂಗಾರ್ ನಲ್ಲಿ ಕೇಳಲಿಲ್ಲ.
ಕಾನೂನು ಹೋರಾಟದುದ್ದಕ್ಕೂ ಆಕೆಯ ಜತೆಗೆ ನಿಂತಿದ್ದು ಆಕೆಯ 72 ವರ್ಷದ ತಾಯಿ. ಪ್ರತಿ ದಿನ ವಿಚಾರಣೆ ನಿಗದಿಯಾದಾಗ ಆಕೆ ತನ್ನ ಮಗಳ ಪರವಾಗಿ ನಿಲ್ಲಲು ನಂಗ್ಲೋಯ್‌ನಿಂದ ನಗರದ ವಿವಿಧ ನ್ಯಾಯಾಲಯಗಳಿಗೆ ಪ್ರಯಾಣಿಸುತ್ತಾರೆ. ಮಗಳಿಗೆ ಬೆಂಬಲ ನೀಡುವ ಸಲುವಾಗಿ ಆಕೆ ಕೆಲವು ವರ್ಷಗಳಿಂದ ದಿಲ್ಲಿಯಲ್ಲಿ ನೆಲೆಸಿದ್ದಾರೆ.
ಆ ತಾಯಿಯ ಬಳಿ ಪಾಲಿಥಿನ್ ಚೀಲವೊಂದಿದೆ. ಎಫ್‌ಐಆರ್ ಪ್ರತಿಗಳು, ವೈದ್ಯಕೀಯ ದಾಖಲೆಗಳು, ನ್ಯಾಯಾಲಯದ ದಾಖಲೆಗಳು, ಪೋಟೋಗಳು ಹೀಗೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಆ ಚೀಲದಲ್ಲಿದೆ.
ಟಿವಿ ಕ್ಯಾಮೆರಾಗಳು ಕಾಣಿಸಿಕೊಂಡಾಗ ಆ ತಾಯಿ ಧರಿಸಿದ್ದ ಮಾಸ್ಕ್ ಸರಿಸಿದರು.
ಪ್ರತಿ ಬಾರಿ ಆಕೆ ಕ್ಯಾಮೆರಾ ಮುಂದೆ ಮಾತನಾಡಲು ಪ್ರಾರಂಭಿಸಿದಾಗ, "ಸೆಂಗಾರ್ ಕೋ ಸಜಾ ಹೋ" (ಸೆಂಗಾರ್ ಗೆ ಶಿಕ್ಷೆಯಾಗಲಿ) ಎಂದು ಹೇಳುತ್ತಾರೆ, ಆಗ ಎಸ್ ಅವರು ಮಧ್ಯಪ್ರವೇಶಿಸಿ ಫಾಂಸಿ (ಗಲ್ಲು ಶಿಕ್ಷೆ) ಅಂತಾರೆ.
ನನ್ನ ಮಗಳು ತನ್ನ ತಂದೆಗೆ ನ್ಯಾಯ ಸಿಗಬೇಕೆಂದು ಹೋರಾಡುತ್ತಿದ್ದಾಳೆ. ನಾವು ಕುಟುಂಬದವರು ಅವರ ಅಂತ್ಯಕ್ರಿಯೆಯನ್ನು ಇಲ್ಲಿವರೆಗೆ ಮಾಡಿಲ್ಲ. ನಮಗೆ ನ್ಯಾಯ ಸಿಕ್ಕಾಗ ನಾವು ಅದನ್ನು ಮಾಡುತ್ತೇವೆ. ಅವರು ನನ್ನ ಮಗಳ ಬಗ್ಗೆ ಮಾತನಾಡುವ ರೀತಿ, ಕಾಮೆಂಟ್‌ಗಳು, ಅವರು ಅತ್ಯಾಚಾರವನ್ನು ಅಮಾನ್ಯಗೊಳಿಸಿದ ರೀತಿ ಇದ್ಯಾವುದನ್ನೂ ನಾವು ಮರೆಯುವುದಿಲ್ಲ ಅಂತಾರೆ ಎಸ್ ಅವರ ಅಮ್ಮ.
ಎಸ್ ಅವರ ಕುಟುಂಬದಲ್ಲಿ, ಎಲ್ಲಾ ಕಿರಿಯ ಹುಡುಗಿಯರು ಆಕೆಯನ್ನು ಗೌರವಿಸುತ್ತಾರೆ. ಎಸ್, ತನ್ನ ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದು, ಇದರಿಂದ ಹಿಂದಣ ಹೆಜ್ಜೆ ಇಡುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ನಾವು ನಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿಲ್ಲ. ಅದು ನಾವು ಮಾಡಬೇಕಾದ ತ್ಯಾಗ. ಆದರೆ, ನಮ್ಮ ಕುಟುಂಬದ ಎಲ್ಲಾ ಮಹಿಳೆಯರು ಅವಳ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ ಅಂತ ಎಸ್ ಅವರ ಅಮ್ಮ ಹೇಳಿದ್ದಾರೆ.
ಆನ್‌ಲೈನ್ ಮತ್ತು ಆಫ್‌ಲೈನ್ ನಲ್ಲಿ ದ್ವೇಷ
ಈ ಹೋರಾಟವು ನ್ಯಾಯಾಲಯದ ಕೊಠಡಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಂತ್ರಸ್ತರನ್ನ ಅಪಖ್ಯಾತಿಗೊಳಿಸುವ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಕಂಡುಬರುತ್ತವೆ. ಇದು ಅವರ ಗೌಪ್ಯತೆಯ ಮೇಲೆ ನಡೆಯುವ ದಾಳಿ . ಆನ್‌ಲೈನ್‌ನಲ್ಲಿ, ನನ್ನನ್ನು ಸಂತ್ರಸ್ತೆ ಎಂದು ಪರಿಗಣಿಸಲಾಗುವುದಿಲ್ಲ. ನನ್ನ ಪ್ರಕರಣವನ್ನು ಫೇಕ್ ಎನ್ನಲಾಗುತ್ತದೆ. ನನಗಾದ ಆಘಾತವನ್ನು "ಕಟ್ಟುಕಥೆ" ಅಂತಾರೆ. ಸ್ಥಳೀಯ ಪತ್ರಕರ್ತರು, ಕಾರ್ಯಕರ್ತರು X ನಲ್ಲಿ, Instagram ನಲ್ಲಿ ಮತ್ತು Facebook ನಲ್ಲಿ ನನ್ನನ್ನು ನಿಂದಿಸುತ್ತಾರೆ.
ಫೇಸ್‌ಬುಕ್‌ನಲ್ಲಿ, ಸೆಂಗಾರ್ ಬೆಂಬಲಿಗರು ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ. "ಭಾರೀ ಚಲಾಕಿತನದಿಂದ ಆಟವಾಡಿದ್ದಾಳೆ" ಎಂದು ಹರಿಯೋಮ್ ಸಿಂಗ್ ಚಾಂಡೆಲ್ ಎಂಬಾತ ಸಂತ್ರಸ್ತೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಮಾರ್ಫ್ ಮಾಡಿದ ಫೋಟೋಗಳನ್ನು ಪ್ರಸಾರ ಮಾಡಲಾಗುತ್ತಿದೆ .ಅಲ್ಲಿ ಸಂತ್ರಸ್ತೆಯ ಮುಖ ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲಿ ಆಕೆ CRPF ಸಿಬ್ಬಂದಿಯ ಹೆಗಲ ಮೇಲೆ ಕೈ ಹಾಕಿರುವುದು ಕಂಡುಬರುತ್ತದೆ.
ಉನ್ನಾವೊ ವಕೀಲೆ ನಂದಿನಿ ದೀಕ್ಷಿತ್ ಈ ಫೋಟೋವನ್ನು "CRPF should be scared of her" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸಂತ್ರಸ್ತೆಯನ್ನು "ಮಾಸ್ಟರ್ ಮೈಂಡ್" ಎಂದು ಹೇಳಿವೆ.
ಸಂತ್ರಸ್ತ ಮಹಿಳೆ ಮತ್ತು ಆಕೆಯ ಚಿಕ್ಕಪ್ಪನ ನಡುವಿನ ಸಂಭಾಷಣೆಯ ಧ್ವನಿಮುದ್ರಣ ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಡಿದೆ. ಆಡಿಯೊದಲ್ಲಿ ಈಕೆಯ ಚಿಕ್ಕಪ್ಪ, ಸೆಂಗಾರ್ ಮೇಲೆ ಸುಳ್ಳು ಆರೋಪ ಹೊರಿಸುವಂತೆ ಹೇಳುತ್ತಿರುವುದು ಕೇಳಿಬರುತ್ತಿದೆ.
ಆಕೆಯ ಆಡಿಯೋ ರೆಕಾರ್ಡಿಂಗ್‌ಗಳನ್ನು ಸ್ಥಳೀಯ ಮಾಧ್ಯಮಗಳು ವ್ಯಾಪಕವಾಗಿ ಹಂಚಿಕೊಂಡಿವೆ. ಇದು ಉನ್ನಾವೊ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಎಂಬ ಶೀರ್ಷಿಕೆಗಳೊಂದಿಗೆ ಆಕೆಯ ಮುಖವನ್ನು ಹಲವಾರು ಬಾರಿ ಬಹಿರಂಗಪಡಿಸಲಾಗಿದೆ.
"ನನ್ನ ಪ್ರಕರಣದ ಬಗ್ಗೆ (ಮಾಧ್ಯಮ ಮತ್ತು ನ್ಯಾಯಾಲಯಗಳಿಂದ) ನಿರಂತರವಾಗಿ ಪ್ರಶ್ನಿಸುವುದರಿಂದ ನನಗೆ ಆಘಾತ ಮರೆತುಹೋಗಿದೆ. ಕೆಲವೊಮ್ಮೆ, ನಾನು ಮಾಧ್ಯಮಗಳಿಗೆ ಹೇಳಿದ ವಾಕ್ಯಗಳು ಮತ್ತೆ ನನಗೆ ನೆನಪಿರುವುದಿಲ್ಲ ಎಂದು ಎಸ್ ಹೇಳಿದ್ದಾರೆ.
ಉನ್ನಾವೊ ಮತ್ತು ದೆಹಲಿಯ ವಕೀಲರು ಪ್ರಕರಣದ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದು ಅವರ ಪ್ರತಿಯೊಂದು ಹೇಳಿಕೆಯನ್ನು "ವಿಶ್ಲೇಷಿಸಿದ್ದಾರೆ".
ಹಮಾರಾ ಕುಲದೀಪ್ ನಿರ್ದೋಷ್ ಹೈ ಎಂಬ ಫೇಸ್‌ಬುಕ್ ಪೇಜ್ ಸಂತ್ರಸ್ತೆ, ಆಕೆಯ ತಾಯಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿವೆ. ಈ ಸಾಮಾಜಿಕ ಮಾಧ್ಯಮ ಖಾತೆಗಳು ಸಂತ್ರಸ್ತೆಯನ್ನು "ಮಾಧ್ಯಮ, ಪ್ರಧಾನಿ ಮತ್ತು ಮುಖ್ಯಮಂತ್ರಿಯನ್ನು ದಾರಿ ತಪ್ಪಿಸುವ" "ನಕಲಿ ಅತ್ಯಾಚಾರ ಸಂತ್ರಸ್ತೆ" ಎಂದು ಲೇಬಲ್ ಮಾಡಿವೆ.
ಸ್ಥಳೀಯ ಪತ್ರಕರ್ತರ ವಾಟ್ಸಾಪ್ ಗುಂಪಿನಲ್ಲಿ, ಸಂತ್ರಸ್ತೆಯ ಚಿತ್ರಗಳನ್ನು ನಿಯಮಿತವಾಗಿ ಹಂಚಿಕೊಳ್ಳಲಾಗುತ್ತದೆ.ಇವರು ಸಂತ್ರಸ್ತೆಯನ್ನೇ ದೂಷಿಸುತ್ತಾರೆ. ಈ ಗುಂಪಿನಲ್ಲಿರುವ ಅನೇಕ ಪೋಸ್ಟ್‌ಗಳು 'ಆಕೆಯೇ ಪುರುಷನೊಂದಿಗೆ ಹೋಗಿದ್ದು' ಎಂದು ಹೇಳುತ್ತವೆ.
ಫೋನ್ ನಲ್ಲಿ ಎಲ್ಲವೂ ಇದೆ
ತನ್ನ ಮೊಬೈಲ್ ಫೋನ್ ಕೈಯಲ್ಲಿ ಹಿಡಿದುಕೊಂಡ ಎಸ್, "ಮೇರಿ ಜಾನ್ ಬಸ್ತಿ ಹೈ ಇಸ್ಮೆ (ನನ್ನ ಜೀವನ ಇದರ ಮೇಲೆ ಅವಲಂಬಿತವಾಗಿದೆ)"ಎಂದು ಹೇಳಿದ್ದಾರೆ. ಆಕೆಯನ್ನು ನಿಂದಿಸಿದ ಕಾಮೆಂಟ್‌ಗಳು ಮತ್ತು ಪೋಸ್ಟ್‌ಗಳ 200 ಕ್ಕೂ ಹೆಚ್ಚು ಸ್ಕ್ರೀನ್‌ಶಾಟ್‌ಗಳನ್ನು ಇದರಲ್ಲಿ ಸೇವ್ ಆಗಿವೆ. ಆಕೆ ಇದರಲ್ಲಿ ಯಾವುದನ್ನೂ ಡಿಲೀಟ್ ಮಾಡಿಲ್ಲ. ಇದು ಆಕೆಯ ಮೇಲೆ ದಿನನಿತ್ಯ ನಡೆಯುವ ಅವಮಾನಗಳ ಡಿಜಿಟಲ್ ಭಂಡಾರವಾಗಿದೆ.
ಏತನ್ಮಧ್ಯೆ, ಉನ್ನಾವೊದಲ್ಲಿನ ಜನರು ಸೆಂಗಾರ್‌ಗಾಗಿ "ಹವನ" ಮತ್ತು "ಸಾರ್ವಜನಿಕ ಪ್ರಾರ್ಥನೆಗಳನ್ನು" ಆಯೋಜಿಸಿದ್ದಾರೆ.
"ನನ್ನ ಅತ್ಯಾಚಾರ ಜನರಿಗೆ ತೃಪ್ತಿ ತಂದಿದೆ" ಅಂತಾರೆ ಎಸ್.
ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಆದೇಶದ ನಂತರ, 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಬೆಂಬಲಿಸಿ ಪ್ರತಿಭಟನೆಗಳನ್ನು ಕಂಡ ರಾಷ್ಟ್ರ ರಾಜಧಾನಿಯ ಬೀದಿಗಳಿಗೆ ಇಳಿಯಲು ಸಂತ್ರಸ್ತೆ ನಿರ್ಧರಿಸಿದರು.
ಡಿಸೆಂಬರ್‌ನಲ್ಲಿ ಈಕೆ, ತಾಯಿ, ಕಾರ್ಯಕರ್ತೆ ಯೋಗಿತಾ ಭಯಾನಾ ಮತ್ತು ಇತರ ಕೆಲವು ಕಾರ್ಯಕರ್ತರು ವಕೀಲ ಮೆಹಮೂದ್ ಪ್ರಾಚಾ ಅವರ ಅಧಿಕಾರಿಯಿಂದ A4 ಗಾತ್ರದ ಕಾಗದದ ಹಾಳೆಗಳು ಮತ್ತು ಕಪ್ಪು ಮಾರ್ಕರ್ ತೆಗೆದುಕೊಂಡು ಸಂಜೆ ನೇರವಾಗಿ ಇಂಡಿಯಾ ಗೇಟ್‌ಗೆ ಪ್ರತಿಭಟಿಸಲು ಹೋಗಿದ್ದರು. ಅಲ್ಲೇ ಘೋಷಣೆಗಳನ ಬರೆದು ಇಂಡಿಯಾ ಗೇಟ್‌ನ ಹುಲ್ಲುಹಾಸಿನ ಮೇಲೆ ಕುಳಿತರು.
"ನಮ್ಮ ಧ್ವನಿಯನ್ನು ಕೇಳಬೇಕಾಗಿರುವುದರಿಂದ ನಾವು ಅಲ್ಲಿಯೇ ಕುಳಿತೆವು. ವಕೀಲರು ಪ್ರಕರಣದಲ್ಲಿ ಚೆನ್ನಾಗಿ ಕಾನೂನು ಹೋರಾಟ ನಡೆಸಿಲ್ಲ.ನಾವು ಮಾಡಬಹುದಾದದ್ದು ಪ್ರತಿಭಟನೆ ಮಾತ್ರ" ಎಂದು ಯೋಗಿತಾ ಹೇಳಿದ್ದಾರೆ.
2018ರಲ್ಲಿ ಸಂತ್ರಸ್ತೆಯನ್ನು ಏಮ್ಸ್ ನಲ್ಲಿ ದಾಖಲಿಸಿದ್ದಾಗ ಯೋಗಿತಾ ಎಸ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು.
"ನಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಯಾರಿಗೂ ಆಕೆಯನ್ನು ಭೇಟಿಯಾಗಲು ಅವಕಾಶವಿರಲಿಲ್ಲ. ನಾನು ಹಲವು ಬಾರಿ ಭೇಟಿಯಾಗಲು ಪ್ರಯತ್ನಿಸಿದೆ. ಕೊನೆಗೆ, 2022 ರಲ್ಲಿ ಅವರು ಗರ್ಭಿಣಿಯಾಗಿದ್ದಾಗ ಮೊಕದ್ದಮೆ ನಡೆಯುತ್ತಿರುವುದರಿಂದ ಅವರಿಗೆ ಹಣಕಾಸಿನ ನೆರವು ಬೇಕು ಎಂದು ಅಪರಿಚಿತ ಸಂಖ್ಯೆಯಿಂದ ನನ್ನನ್ನು ಸಂಪರ್ಕಿಸಿದರು ಎಂದು ಯೋಗಿತಾ ಹೇಳಿದರು.
ಯೋಗಿತಾಗೆ, ಎಸ್ ಇತರ ಯಾವುದೇ ಸಂತ್ರಸ್ತೆಯಂತೆ ಅಲ್ಲ.
"ಆಕೆ ಗಟ್ಟಿಗಿತ್ತಿ. ಆಕೆ ಚೆನ್ನಾಗಿ ಮಾತನಾಡುತ್ತಾಳೆ. ಅಗತ್ಯವಿದ್ದಾಗ ಸಹಾಯ ಕೇಳುತ್ತಾಳೆ. ನೇತಾಗಿರಿಯನ್ನು ಹತ್ತಿರದಿಂದ ನೋಡಿದ ಕುಟುಂಬದವರು ಆಕೆ. ಅತ್ಯಾಚಾರದ ಆಘಾತವನ್ನು ನಾನು ಎಂದಿಗೂ ನೋಡಿಲ್ಲ, ಆದರೆ ರಸ್ತೆ ಅಪಘಾತವೇ ಅವಳನ್ನು ನಿಜವಾಗಿಯೂ ಬೆಚ್ಚಿಬೀಳಿಸಿದೆ."
ಪ್ರಕರಣದ ದಾಖಲೆಗಳ ಪ್ರಕಾರ, 2019 ರಲ್ಲಿ ಅತ್ಯಾಚಾರ ಸಂತ್ರಸ್ತೆ, ಆಕೆಯ ವಕೀಲ ಮತ್ತು ಇಬ್ಬರು ಚಿಕ್ಕಮ್ಮಂದಿರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ಆಕೆಯ ಚಿಕ್ಕಮ್ಮಂದಿರು ಸಾವಿಗೀಡಾಗಿದ್ದು, ಸಂತ್ರಸ್ತೆ ಮತ್ತು ಆಕೆಯ ವಕೀಲರು ಗಂಭೀರ ಗಾಯಗೊಂಡಿದ್ದರು.
ಡಿಸೆಂಬರ್ 23 ರಂದು, ದೆಹಲಿ ಹೈಕೋರ್ಟ್‌ನಿಂದ ಸೆಂಗಾರ್‌ಗೆ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ದೊರೆತ ದಿನ ಎಸ್ ಅವರು ಯೋಗಿತಾ ಅವರನ್ನು ಭೇಟಿ ಮಾಡಲು ಕರೆದರು.
ಆಕೆ ನನ್ನನ್ನು ತಬ್ಬಿಕೊಂಡು ಅತ್ತಳು. ಆಕೆ ಕುಗ್ಗಿದ್ದನ್ನು ನಾನು ನೋಡಿದ್ದು ಅದೇ ಮೊದಲು ಎಂದು ಹೇಳಿದ್ದಾರೆ ಯೋಗಿತಾ.
2017 ರ ಮೊದಲು ಎಸ್ ಬದುಕು ಬೇರೆಯೇ ಆಗಿತ್ತು.ಆಕೆ ಚಿಕ್ಕ ವಯಸ್ಸಿನಿಂದಲೂ ರಾಯ್ ಬರೇಲಿಯಲ್ಲಿ ತನ್ನ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದರು. 2013 ರಲ್ಲಿ ಆಕೆ ಉನ್ನಾವೊಗೆ ಸ್ಥಳಾಂತರಗೊಂಡಿದ್ದರು.
"ಅದು ಹೊಸ ನಗರವಾಗಿತ್ತು. ನನ್ನ ಹೊಸ ಬದುಕಿನ ಬಗ್ಗೆ ಉತ್ಸುಕಳಾಗಿದ್ದೆ. ನನಗೆ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ, ಆದರೆ ಶಾಲೆಗೆ ಹೋಗಬೇಕೆಂದು ನಾನು ಬಯಸಿದ್ದೆ. ನಾನು ಹೊಸ ಬದುಕು ಶುರು ಮಾಡಬೇಬೇಕೆಂದು ಆಶಿಸುತ್ತಿದ್ದ ಅದೇ ನಗರದಲ್ಲಿ, ಕೇವಲ ನಾಲ್ಕು ವರ್ಷಗಳಲ್ಲಿ ನನ್ನ ಇಡೀ ಜೀವನವು ತಲೆಕೆಳಗಾಗಿ ಬಿಡುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದು ಎಸ್ ಹೇಳಿದ್ದಾರೆ.
ಆಕೆಯ ಬದುಕಿನ ಮುಂದಿನ ಅಧ್ಯಾಯವನ್ನು ಈಗ ದೆಹಲಿಯಲ್ಲಿ ಬರೆಯಲಾಗುತ್ತಿದೆ. ನಾನು ದೂರ ಸರಿಯಲು, ಹಿಂದೆ ಹೆಜ್ಜೆ ಇಡಲು ಬಯಸುವುದಿಲ್ಲ ಎಂಬುದು ಆಕೆಯ ಗಟ್ಟಿ ನಿಲುವು.

