HEALTH TIPS

12ನೇ ತರಗತಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ChatGPT ಬಳಕೆ

ಮುಂಬೈ: ಹನ್ನೆರಡನೇ ತರಗತಿ ಮಂಡಳಿ ಪರೀಕ್ಷೆಗಳಲ್ಲಿ ಸಾಮೂಹಿಕವಾಗಿ ನಕಲು ಮಾಡಲು ಕೃತಕ ಬುದ್ಧಿಮತ್ತೆ ಸಾಧನ ಚಾಟ್‌ಜಿಪಿಟಿಯನ್ನು ಬಳಸಿರುವುದು ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಿಸಿ ಶಿಕ್ಷಕರು ಹಾಗೂ ಪರೀಕ್ಷಾ ಸಿಬ್ಬಂದಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡ್ಚಿರೋಳಿ ಜಿಲ್ಲೆಯ ಚಾರ್ಮೋಶಿ ಪರೀಕ್ಷಾ ಕೇಂದ್ರ ಸಂಖ್ಯೆ 18ರಲ್ಲಿರುವ ಜೆಕೆ ಬೊಮನ್ವಾರ್ ಪ್ರೌಢ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ.

ಅಧಿಕಾರಿಗಳ ಪ್ರಕಾರ, 12ನೇ ತರಗತಿಯ ಮಂಡಳಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಪಡೆಯಲು ಚಾಟ್‌ಜಿಪಿಟಿಯನ್ನು ಬಳಸುವ ಹಾಗೂ ಅದನ್ನು ವಿದ್ಯಾರ್ಥಿಗಳಲ್ಲಿ ಪ್ರಸಾರ ಮಾಡುವ ಕಾರ್ಯವನ್ನು ಈ ಜಾಲ ಒಳಗೊಂಡಿದೆ.

ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಗಳ ಮೊಹರು ತೆಗೆದ ಕೂಡಲೆ, ಜವಾನ ಸೂರಜ್ ಕೆಲ್ಝಾರ್ಕರ್ ಪ್ರಶ್ನೆ ಪತ್ರಿಕೆಗಳ ಸ್ಕ್ರೀನ್ ಶಾಟ್ ತೆಗೆದು ವ್ಯಾಟ್ಸ್ ಆಯಪ್ ಮೂಲಕ ಶಿಕ್ಷಕ ಮಹೇಂದ್ರ ಕಿರಾಮೆಗೆ ಕಳುಹಿಸುವುದು ಈ ಜಾಲದ ಕಾರ್ಯ ವಿಧಾನವಾಗಿತ್ತು.

ಕಿರಾಮೆ ಈ ಪ್ರಶ್ನೆ ಪತ್ರಿಕೆಗಳನ್ನು ಚಾಟ್‌ಜಿಪಿಟಿಗೆ ಅಪ್ ಲೋಡ್ ಮಾಡಿ ಉತ್ತರ ಪಡೆಯುತ್ತಿದ್ದ. ಅನಂತರ ಶಾಲೆಯ ಪ್ರಿಂಟರ್ ಬಳಸಿ ಈ ಉತ್ತರಗಳ ಪ್ರತಿ ಮಾಡಲಾಗುತ್ತಿತ್ತು ಹಾಗೂ ಜವಾನನ ನೆರವಿನಿಂದ ವಿದ್ಯಾರ್ಥಿಗಳಿಗೆ ಹಂಚಲಾಗುತ್ತಿತ್ತು.

ಈ ಕೇಂದ್ರದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ರಾಜಕೀಯ ವಿಜ್ಞಾನ ಪರೀಕ್ಷೆಗಳ ಸಂದರ್ಭ ಸಾಮೂಹಿಕ ನಕಲು ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡ್ಚಿರೋಳಿ ಜಿಲ್ಲಾ ಪರಿಷದ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈ ನಕಲು ಆರೋಪದ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಫೆಬ್ರವರಿ 18ರಂದು ಕೇಂದ್ರದ ಮೇಲೆ ದಾಳಿ ನಡೆಸಲು ಒಂದು ತಂಡವನ್ನು ಕಳುಹಿಸಲಾಯಿತು. ಈ ಸಂದರ್ಭ ಹಲವು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳಲ್ಲಿ ಒಂದೇ ರೀತಿಯ ಉತ್ತರಗಳನ್ನು ಬರೆದಿರುವುದು ಕಂಡು ಬಂದಿದೆ.

ಇದರ ಆಧಾರದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕ ಮಹೇಂದ್ರ ಕಿರಾಮೆ, ಸುಶೀಲ್ ಲಂಜೇವರ್, ಪರೀಕ್ಷಾ ಕೇಂದ್ರದ ಉಸ್ತುವಾರಿ ಸುರೇಶ್ ಬುರ್ಲೇವಾರ್ ಹಾಗೂ ಜವಾನ ಸೂರಜ್ ಕೆಲ್ಝಾರ್ಕರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries