ಮಂಜೇಶ್ವರ: ಮಂಜೇಶ್ವರ ಗೊವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್) ಸ್ವಯಂಸೇವಕರು ತಮ್ಮ ಬೇಸಿಗೆ ಶಿಬಿರದ ಅಂಗವಾಗಿ ಮಣಿಯಂಪಾರೆ ಸನಿಹದ ದೇರಡ್ಕದಲ್ಲಿ ನೂತನ ರಸ್ತೆ ನಿರ್ಮಿಸುವ ಮೂಲಕ ಊರವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದೇರಡ್ಕದಿಂದ ಮಣಿಯಂಪಾರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಊರವರ ಸಹಕಾರದೊಂದಿಗೆ ನಿರ್ಮಿಸಿಕೊಟ್ಟಿದ್ದಾರೆ. ಕುರುಚಲುಕಾಡು, ಪೊದೆಗಳಿಂದ ಆವೃತವಾಗಿದ್ದ ಈ ಪ್ರದೇಶದಲ್ಲಿ ಸುಂದರ ರಸ್ತೆ ನಿರ್ಮಾಣಗೊಳ್ಳುವ ಮೂಲಕ ಊರಿನ ಜನತೆಗೆ ಸಾರಿಗೆ ಸೌಕರ್ಯದ ಭಾಗ್ಯ ಲಭಿಸಿದಂತಾಗಿದೆ. ನೂತನ ರಸ್ತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಎಎಸ್ ಸೋಮಶೇಖರ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಶರತ್ಚಂದ್ರ ಶೆಟ್ಟಿ, ಮಂಜೇಶ್ವರ ಸರ್ಕಾರ ಕಾಲೇಜು ಪ್ರಾಂಶುಪಾಲ ಡಾ. ಮಹಮ್ಮದಾಲಿ ಪೆರ್ಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಕ್ಟರ್ ಡಿ.ಸೋಜ, ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಅಬೂಬಕ್ಕರ್ ಪೆರ್ದನೆ, ಎಂ.ಎಚ್ ಹ್ಯಾರಿಸ್,ಸೂರ್ಯನಾಯಕ್ ಶೇಣಿ ಮೊದಲಾದವರು ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಕಾರ್ಯದರ್ಶಿ ಅನುಶ್ರೀ ಸ್ವಾಗತಿಸಿದರು. ಫಾತಿಮಾ ನವಾಲ್ ವಂದಿಸಿದರು.


