ರಾಜಮಹೇಂದ್ರವರಂ: ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ ಅನಧಿಕೃತ ಮಾರಾಟಗಾರರಿಂದ ಪೂರೈಕೆಯಾದ ಕಲಬೆರಕೆ ಹಾಲು ಕುಡಿದು ಎರಡು ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಭಾನುವಾರ ಇಬ್ಬರು ಮತ್ತು ಸೋಮವಾರ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ 12 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೀರ್ತಿ ಚೇಕುರಿ ಸೋಮವಾರ ಮಾಹಿತಿ ನೀಡಿದರು.
ಕಲಬೆರಕೆ ಹಾಲು ಸೇವನೆಯಿಂದ ಮೂತ್ರಪಿಂಡ ವೈಫಲ್ಯ ಆಗಿ, ಮೂತ್ರ ವಿಸರ್ಜನೆ ಕಷ್ಟವಾಗಿ ಸಾವು ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಇಲ್ಲಿನ ಉತ್ತರ ವಲಯದ ಡಿಎಸ್‌ಪಿ ವೈ ಶ್ರೀಕಾಂಗ್ ಮಾಹಿತಿ ನೀಡಿದರು.
ಮೃತಪಟ್ಟ ನಾಲ್ವರ ಮನೆಗಳಿಗೂ ಸ್ಥಳೀಯ ಮಾರಾಟಗಾರರೊಬ್ಬರೇ ಹಾಲು ಪೂರೈಸಿದ್ದಾರೆ. ಈ ಮಾರಾಟಗಾರ ತನ್ನ 46 ಹಸುಗಳು ಮತ್ತು ಇತರ ಸ್ಥಳೀಯ ರೈತರಿಂದ ಹಾಲನ್ನು ಪಡೆದು ಮನೆಗಳಿಗೆ ವಿತರಿಸುತ್ತಿದ್ದರು ಎಂದು ಡಿಎಸ್‌ಪಿ ಹೇಳಿದರು.
ಈ ಮಾರಾಟಗಾರ ಹಾಲು ಪೂರೈಸಿರುವ 106 ಮನೆಗಳಲ್ಲಿನ ಜನರ ರಕ್ತಪರೀಕ್ಷೆ ನಡೆಲಾಗುತ್ತಿದ್ದು, ನಿರಂತರ ವೈದ್ಯಕೀಯ ಮೇಲ್ವಿಚಾರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಶುಸಂಗೋಪನಾ ಇಲಾಖೆಯು 46 ಜಾನುವಾರುಗಳನ್ನು ಪರೀಕ್ಷಿಸಿ, ಅವುಗಳ ರಕ್ತದ ಮಾದರಿಗಳನ್ನು ಪಶುವೈದ್ಯಕೀಯ ಪ್ರಯೋಗಾಲಯಗಳಿಗೆ ರವಾನಿಸಿದ್ದಾರೆ. ಅಲ್ಲದೆ ಆಹಾರ ಸುರಕ್ಷತಾ ಅಧಿಕಾರಿಗಳು ಹಾಲು ಮತ್ತು ಮೊಸರಿನ ಮಾದರಿಗಳನ್ನು ಹೈದರಾಬಾದ್ ಮತ್ತು ವಿಶಾಖಪಟ್ಟಣಂನ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ.
ಕಠಿಣ ಕ್ರಮಕ್ಕೆ ಸಿ.ಎಂ ಸೂಚನೆ:
ಕಲಬೆರಕೆ ಹಾಲು ಸೇವಿಸಿ ನಾಲ್ವರು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸೋಮವಾರ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿ, ಹಾಲು ಮಾರಾಟಗಾರನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಚಿಕಿತ್ಸೆ ಪಡೆಯುತ್ತಿರುವವರಿಗೆ ಉತ್ತಮ ವೈದ್ಯಕೀಯ ಆರೈಕೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ವೈ.ಎಸ್.ಜಗನ್ ಮೋಹನ್ ರೆಡ್ಡಿ ವೈಎಸ್‌ಆರ್‌ಸಿಪಿ ಮುಖ್ಯಸ್ಥಆಹಾರ ಸುರಕ್ಷತೆಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಇದು ಗಂಭೀರ ಲೋಪ. ಕಲಬೆರಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು
₹10 ಲಕ್ಷ ಪರಿಹಾರ ಘೋಷಿಸಿದ ನಾಯ್ಡು
ಕಲಬೆರಕೆ ಹಾಲು ಕುಡಿದು ಮೃತಪಟ್ಟ ನಾಲ್ವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೋಮವಾರ ಘೋಷಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು ಈ ಪ್ರಕರಣದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರ ಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು. ಈ ಪ್ರಕರಣ ಕುರಿತು ಸರ್ಕಾರ ಎಲ್ಲ ಕೋನಗಳಿಂದಲೂ ವಿಚಾರಣೆ ನಡೆಸುತ್ತಿದ್ದು ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಉದ್ದೇಶಪೂರ್ವಕವಾಗಿ ಹಾಲಿಗೆ ಕಲಬೆರಕೆ ಮಾಡಿದ್ದು ಗೊತ್ತಾದರೆ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು ರಾಜ್ಯದಲ್ಲಿ ಯಾವುದೇ ರೀತಿಯ ಕಲಬೆರಕೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಒಬ್ಬ ವಶಕ್ಕೆ: ಮೃತರ ಮನೆಗಳಿಗೆ ಹಾಲು ಪೂರೈಸಿದ್ದ ಮಾರಾಟಗಾರನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

