HEALTH TIPS

ಕಿಶ್ತವಾಡ ಕಾರ್ಯಾಚರಣೆ: ಉಗ್ರಜಾಲಕ್ಕೆ ಭಾರಿ ಹೊಡೆತ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯ ಛಾಟ್ರೂ ಪ್ರದೇಶದಲ್ಲಿ ಭಾನುವಾರ ನಡೆದ ಪಾಕಿಸ್ತಾನ ಮೂಲದ ಜೈಶ್‌-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮೂವರು ಭಯೋತ್ಪಾದಕರ ಹತ್ಯೆಯು ಭಯೋತ್ಪಾದಕ ಜಾಲಕ್ಕೆ ಭಾರಿ ಹೊಡೆತ ನೀಡಿದೆ ಎಂದು ಭಾರತೀಯ ಸೇನೆ ಬಣ್ಣಿಸಿದೆ.

ಕಿಶ್ತವಾಡ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ವರ್ಷಕ್ಕೂ ದೀರ್ಘ ಕಾಲದಿಂದ ನಡೆಯುತ್ತಿದ್ದ ಜಂಟಿ ಕಾರ್ಯಾಚರಣೆಯು ಅತ್ಯಂತ ಸವಾಲಿನದ್ದಾಗಿತ್ತು. ಶೀತ, ಮಳೆ ಮತ್ತು ಹಿಮಪಾತದಂತಹ ಸವಾಲಿನ ಪರಿಸ್ಥಿತಿಗಳ ನಡುವೆಯೂ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಾಯಿತು ಎಂದು ಅದು ಹೇಳಿದೆ.

ಸೇನಾ ಪಡೆಗಳು, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆಯು ಪ್ರತಿಕೂಲ ಪರಿಸ್ಥಿತಿಯಲ್ಲೂ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕರನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿವೆ. ಮೃತ ಮೂವರು ಭಯೋತ್ಪಾದಕರಲ್ಲಿ ಒಬ್ಬ ಜೆಇಎಂನ ಕಮಾಂಡರ್‌ ಸೈಫುಲ್ಲಾ ಸಹ ಸೇರಿದ್ದ ಎಂದು ಸೇನೆ ತಿಳಿಸಿದೆ.

ನಾಗರಿಕ ಮತ್ತು ಸೇನಾ ಗುಪ್ತಚರ ಮಾಹಿತಿ ಆಧರಿಸಿ ಈ ಪಡೆಗಳು ಕಿಶ್ತವಾಡ ವ್ಯಾಪ್ತಿಯಲ್ಲಿ ಏಳು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದೆ ಎಂದು ಸೇನೆ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

ತಂತ್ರಜ್ಞಾನದ ಬಳಕೆ:

ಈ ಜಂಟಿ ಕಾರ್ಯಾಚರಣೆಯಲ್ಲಿ ತಂತ್ರಜ್ಞಾನವನ್ನು ನಿರಂತರವಾಗಿ ಬಳಸಿಕೊಳ್ಳಲಾಗಿದೆ. ಎಫ್‌ಪಿವಿ ಡ್ರೋನ್‌ಗಳು, ಉಪಗ್ರಹ ಚಿತ್ರಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ ಎಂದು ಸೇನೆ ಹೇಳಿದೆ.

ಕಿಶ್ತವಾಡದಲ್ಲಿ ನಡೆದ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಗಾಯಗೊಂಡಿರುವ 'ಟೈಸನ್‌'

ಜೆಇಎಂನ 'ಇಸ್ರೇಲ್‌ ಗ್ರೂಪ್‌'ನ ಪತನ

ಕಿಶ್ತವಾಡದಲ್ಲಿ ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಹತರಾದ ಮೂವರು ಭಯೋತ್ಪಾದಕರನ್ನು ಜೈಶ್‌-ಎ-ಮೊಹಮ್ಮದ್‌ನ 'ಇಸ್ರೇಲ್‌ ಗ್ರೂಪ್‌'ಗೆ ಸೇರಿದವರು ಎಂದು ಭದ್ರತಾ ಪಡೆಗಳು ಗುರುತಿಸಿವೆ. ಈ ಮೂಲಕ ಒಂದೂವರೆ ವರ್ಷದಿಂದ ನಡೆಯುತ್ತಿರುವ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದ್ದು ಈ ಗುಂಪಿನ ಏಳೂ ಸದಸ್ಯರನ್ನು ಹೊಡೆದುರುಳಿಸಿದಂತೆ ಆಗಿದೆ ಎಂದು ಜಮ್ಮು ವಲಯದ ಐಜಿಪಿ ಭೀಮ್‌ಸೇನ್‌ ಟುಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಗುಂಪಿನ ಏಳು ಭಯೋತ್ಪಾದಕರು 2024ರಲ್ಲಿ ಭಾರತದೊಳಗೆ ನುಸುಳಿದ್ದರು. ವಿವಿಧೆಡೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಇವರು ಭಾಗಿಯಾಗಿದ್ದರು. ಭಾನುವಾರದ ಕಾರ್ಯಾಚರಣೆಯಲ್ಲಿ ಜೆಇಎಂ ಕಮಾಂಡರ್‌ ಸೈಫುಲ್ಲಾ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಈ ಗುಂಪನ್ನು ಅಂತ್ಯಗೊಳಿಸಿದಂತಾಗಿದೆ ಎಂದು ಅವರು ಮಾಹಿತಿ ನೀಡಿದರು.

ಟೈಸನ್‌ ಸಾಹಸ ಸ್ಮರಣೆ

ಸೇನಾ ತರಬೇತಿ ಪಡೆದ ನಾಯಿ ಟೈಸನ್‌ ಜಂಟಿ ಕಾರ್ಯಾಚರಣೆ ವೇಳೆ ತೋರಿದ ಸಾಹಸವನ್ನು ಮೇಜರ್‌ ಜನರಲ್‌ ಎ.ಪಿ.ಎಸ್‌.ಬಾಲ್‌ ಕೊಂಡಾಡಿದರು. ಭಯೋತ್ಪಾದಕರು ಹಾರಿಸಿದ ಗುಂಡೇಟಿನಿಂದಾಗಿ ಅದು ಗಾಯಗೊಂಡಿದೆ. 'ಭಯೋತ್ಪಾದಕರು ಅಡಗಿದ್ದ ಗುಡಿಸಲಿನ ಬಳಿ ‍ಪರಿಶೀಲನೆಗಾಗಿ ಟೈಸನ್‌ ಅನ್ನು ನಿಯೋಜಿಸಲಾಗಿತ್ತು. ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದವು. ಗುಂಡಿನ ಚಕಮಕಿ ವೇಳೆ ಭಯೋತ್ಪಾದಕರ ಗುಂಡು ಟೈಸನ್‌ಗೆ ತಗುಲಿತು. ಜರ್ಮನ್‌ ಶೆಫರ್ಡ್‌ ತಳಿಯ ಟೈಸನ್‌ ಅನ್ನು ಕೂಡಲೇ ಚಿಕಿತ್ಸೆಗಾಗಿ ಏರ್‌ಲಿಫ್ಟ್‌ ಮಾಡಲಾಯಿತು. ಈಗ ಅದರ ಆರೋಗ್ಯ ಸ್ಥಿರವಾಗಿದೆ' ಎಂದು ಅವರು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries