"ಯಾದವ್ ಜಿ ಕಿ ಲವ್ ಸ್ಟೋರಿ" ಚಿತ್ರವನ್ನು ನಿಷೇಧಿಸಬೇಕು ಅಥವಾ ಹೆಸರು ಬದಲಾಯಿಸಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ಚಿತ್ರವು ಯಾದವ್ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ವಿಶ್ವ ಯಾದವ್ ಪರಿಷತ್ ಮುಖ್ಯಸ್ಥರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ಚಿತ್ರದಲ್ಲಿ ಯಾದವ್ ಸಮುದಾಯದ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ವೇಳೆ ಪೀಠವು, ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದರಿಂದ ದೇಶದ ಸಾಮಾಜಿಕ ಏಕತೆ ಹಾಳಾಗುತ್ತದೆಯೇ?" ಎಂದು ಪ್ರಶ್ನಿಸಿದೆ.
ಚಿತ್ರದ ಶೀರ್ಷಿಕೆಯಲ್ಲಿ ಯಾದವ್ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುವ ಯಾವುದೇ "ವಿಶೇಷಣ" ಅಥವಾ "ಪದವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

