ರಷ್ಯಾ-ಉಕ್ರೇನ್ ನಡುವೆ ಯುದ್ಧಕ್ಕೆ ಫೆ.24ರಂದು ನಾಲ್ಕು ವರ್ಷಗಳು ತುಂಬಿದ್ದು, ಇದು ದ್ವಿತೀಯ ವಿಶ್ವಯುದ್ಧದ ಬಳಿಕ ಯುರೋಪ್‌ನಲ್ಲಿಯ ಅತ್ಯಂತ ಮಾರಕ ಸಂಘರ್ಷವಾಗಿದೆ.
ಮಂಗಳವಾರ ಉಕ್ರೇನ್ ಮಂಡಿಸಿದ ನಿರ್ಣಯವನ್ನು 193 ಸದಸ್ಯರ ಅಧಿವೇಶನವು ಅಂಗೀಕರಿಸಿತು. ನಿರ್ಣಯದ ಪರವಾಗಿ 107 ಮತ್ತು ನಿರ್ಣಯದ ವಿರುದ್ಧವಾಗಿ 12 ದೇಶಗಳು ಮತ ಚಲಾಯಿಸಿದ್ದವು.
ಭಾರತವಲ್ಲದೆ ನಿರ್ಣಯದಿಂದ ದೂರವುಳಿದ ಇತರ 50 ಸದಸ್ಯ ರಾಷ್ಟ್ರಗಳಲ್ಲಿ ಬಹರೈನ್, ಬಾಂಗ್ಲಾದೇಶ, ಬ್ರೆಝಿಲ್, ಚೀನಾ, ದಕ್ಷಿಣ ಆಫ್ರಿಕಾ, ಶ್ರಿಲಂಕಾ, ಯುಎಇ ಮತ್ತು ಅಮೆರಿಕ ಸೇರಿವೆ.
ನಿರ್ಣಯವು ಉಕ್ರೇನ್‌ನ ಸಾರ್ವಭೌಮತೆ,ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಖಂಡತೆಗೆ ಬೆಂಬಲವನ್ನು ಪುನರುಚ್ಚರಿಸಿದೆ. ಜೊತೆಗೆ ಯುದ್ಧಕೈದಿಗಳ ವಿನಿಮಯ ಹಾಗೂ ಬಲವಂತದಿಂದ ಸ್ಥಳಾಂತರಿಸಲ್ಪಟ್ಟ ಅಥವಾ ಗಡಿಪಾರುಗೊಂಡ ನಾಗರಿಕರು ಮತ್ತು ಮಕ್ಕಳನ್ನು ಮರಳಿಸುವಂತೆ ಒತ್ತಾಯಿಸಿದೆ.
ನಾಗರಿಕರು, ನಾಗರಿಕ ಆಸ್ತಿಗಳು ಮತ್ತು ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ರಷ್ಯಾದಿಂದ ನಿರಂತರ ಮತ್ತು ತೀವ್ರ ದಾಳಿಗಳು ಹಾಗೂ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಕುರಿತು ಕಳವಳವನ್ನೂ ನಿರ್ಣಯವು ವ್ಯಕ್ತಪಡಿಸಿದೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ನಿರ್ಣಯವನ್ನು ಬೆಂಬಲಿಸಿದ 107 ದೇಶಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ,ಇದು ಶಾಂತಿಸ್ಥಾಪನೆಯತ್ತ ಸರಿಯಾದ ಮತ್ತು ಅಗತ್ಯ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಈ ವಿಷಯದಲ್ಲಿ ಭಾರತವು ತಟಸ್ಥವಾಗಿಲ್ಲ, ಬದಲಿಗೆ ಅದು ಶಾಂತಿಯ ಪರವಾಗಿದೆ ಎಂದು ಪದೇಪದೇ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಉಕ್ರೇನ್‌ನಲ್ಲಿ ಸಂಘರ್ಷವನ್ನು ಅಂತ್ಯಗೊಳಿಸಲು ಭಾರತದ ಬೆಂಬಲವನ್ನು ಒತ್ತಿ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ಜಾಗತಿಕ ಶಾಂತಿಗೆ ಬೆದರಿಕೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಣ್ಣಿಸಿರುವ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು,'ಈ ವಿನಾಶಕಾರಿ ಯುದ್ಧವು ನಮ್ಮ ಸಾಮೂಹಿಕ ಪ್ರಜ್ಞೆಗೆ ಒಂದು ಕಳಂಕವಾಗಿದೆ. ಯುದ್ಧ ಮುಂದುವರಿದಷ್ಟೂ ಅದು ಇನ್ನಷ್ಟು ಮಾರಣಾಂತಿಕವಾಗುತ್ತದೆ 'ಎಂದು ಹೇಳಿದ್ದಾರೆ.

