ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷಾವಧಿಯನ್ನು ಬಾಂಬೆ ಹೈಕೋರ್ಟ್ 12 ವರ್ಷಗಳಿಗೆ ಕಡಿತಗೊಳಿಸಿದೆ.
ಅಪರಾಧ ನಡೆದ ಸಂದರ್ಭದಲ್ಲಿ ಆರೋಪಿಯ ಕಿರಿಯ ವಯಸ್ಸು, ದೀರ್ಘಕಾಲದ ಜೈಲು ವಾಸ ಹಾಗೂ ಕಾರಾಗೃಹದಲ್ಲಿರುವ ಅವಧಿಯಲ್ಲಿ ತೋರಿದ ಸುಧಾರಣೆ, ಮಹಾತ್ಮ ಗಾಂಧಿಯ ಕುರಿತು ಪ್ರಬಂಧ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಉಲ್ಲೇಖಿಸಿ ಈ ತೀರ್ಪನ್ನು ನೀಡಲಾಗಿದೆ.
ಫೆಬ್ರವರಿ 2ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ಸಂದೇಶ್ ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು 2016ರ ದೋಷಾರೋಪಣೆಯನ್ನು ಎತ್ತಿ ಹಿಡಿದರೂ, ಶಿಕ್ಷೆ ಕಡಿತಗೊಳಿಸಲು ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಶೇಷ ಪೊಕ್ಸೊ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಅಪರಾಧದ ಸಮಯದಲ್ಲಿ ಅಪರಾಧಿಗೆ 20 ವರ್ಷ ವಯಸ್ಸಾಗಿತ್ತು. ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. 2016ರ ಡಿಸೆಂಬರ್ ನಿಂದ ಬಂಧನದಲ್ಲಿದ್ದು, COVID-19 ಸಾಂಕ್ರಾಮಿಕ ಸಮಯದಲ್ಲಿಯೂ ಕೂಡ ಬಿಡುಗಡೆ ಮಾಡಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಪ್ರಬಂಧ ಸ್ಪರ್ಧೆ ಮತ್ತು ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಅಧ್ಯಯನ ಮಾಡುವ ಕಾರ್ಯಕ್ರಮ ಸೇರಿದಂತೆ ಜೈಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅಪರಾಧಿ ಭಾಗವಹಿಸಿರುವ ಕುರಿತ ಪ್ರಮಾಣಪತ್ರಗಳನ್ನು ಕೂಡ ಪೀಠವು ಗಮನಿಸಿದೆ.

