HEALTH TIPS

ಪಶ್ಚಿಮ ಏಶ್ಯಾ ಭೂಮಿಯ ಮೇಲೆ ಇಸ್ರೇಲ್ ಹಕ್ಕು ಕುರಿತು ಅಮೆರಿಕ ರಾಯಭಾರಿ ಹೇಳಿಕೆಗೆ ಅರಬ್, ಮುಸ್ಲಿಂ ದೇಶಗಳ ಖಂಡನೆ

ಖತಾರ್: ಇಸ್ರೇಲ್ ಪಶ್ಚಿಮ ಏಶ್ಯಾದ ವಿಶಾಲ ಪ್ರದೇಶದ ಮೇಲೆ ಬೈಬಲ್ ಆಧಾರಿತ ಹಕ್ಕನ್ನು ಹೊಂದಿತ್ತು ಎಂಬ ಇಸ್ರೇಲ್‌ನಲ್ಲಿ ಅಮೆರಿಕದ ರಾಯಭಾರಿಯಾಗಿರುವ ಮೈಕ್ ಹಕ್‌ಬೀ ಅವರ ಹೇಳಿಕೆಯನ್ನು ಅರಬ್ ಮತ್ತು ಇಸ್ಲಾಮಿಕ ದೇಶಗಳು ರವಿವಾರ ಜಂಟಿಯಾಗಿ ಖಂಡಿಸಿವೆ ಎಂದು thehindu.com ವರದಿ ಮಾಡಿದೆ.

ಹಕ್‌ಬೀ ಅವರು ಬಲಪಂಥೀಯ ನಿರೂಪಕ ಮತ್ತು ಇಸ್ರೇಲ್ ಟೀಕಾಕಾರ ಟಕರ್ ಕಾರ್ಲ್ಸ್‌ನ್ ಅವರ ಪಾಡ್‌ಕಾಸ್ಟ್‌ನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ಶುಕ್ರವಾರ ಬಿಡುಗಡೆಯಾದ ಪಾಡ್‌ಕಾಸ್ಟ್ ಸಂಚಿಕೆಯಲ್ಲಿ ಕಾರ್ಲ್ಸ್‌ನ್ ಅವರು ಈಜಿಪ್ಟ್‌ನ ನೈಲ್ ನದಿ ಹಾಗೂ ಸಿರಿಯಾ ಮತ್ತು ಇರಾಕ್‌ಗಳಲ್ಲಿ ಹರಿಯುವ ಯೂಫ್ರಟಿಸ್ ನದಿ ನಡುವಿನ ಭೂಭಾಗದ ಮೇಲೆ ಇಸ್ರೇಲ್ ಹಕ್ಕು ಹೊಂದಿದೆ ಎಂದು ಕೆಲವೊಮ್ಮೆ ವ್ಯಾಖ್ಯಾನಿಸಲಾಗುವ ಬೈಬಲ್‌ನಲ್ಲಿಯ ವಾಕ್ಯದ ಅರ್ಥದ ಕುರಿತು ಹಕ್‌ಬೀ ಅವರನ್ನು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಹಕ್‌ಬೀ, ಇಸ್ರೇಲ್ ಅದೆಲ್ಲ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡರೆ ಒಳ್ಳೆಯದು ಎಂದು ಹೇಳಿದರು. ಕಾರ್ಲ್ಸನ್ ಹೆಚ್ಚಿನ ವಿವರಣೆಗೆ ಒತ್ತಾಯಿಸಿದಾಗ ಹಕ್‌ಬೀ, ಇಸ್ರೇಲ್ ಎಲ್ಲ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳಲು ಬಯಸುತ್ತಿಲ್ಲ. ಅದು ಸ್ವಲ್ಪ ಮಟ್ಟಿಗೆ ಉತ್ಪ್ರೇಕ್ಷೆಯ ಹೇಳಿಕೆಯಾಗಿತ್ತು ಎಂದು ಸಮಜಾಯಿಷಿ ನೀಡಿದರು.

ಒಂದು ಡಜನ್‌ಗೂ ಅಧಿಕ ಅರಬ್ ಮತ್ತು ಇಸ್ಲಾಮಿಕ್ ಸರಕಾರಗಳು ಹಾಗೂ ಮೂರು ಪ್ರಮುಖ ಪ್ರಾದೇಶಿಕ ಸಂಘಟನೆಗಳು ಹಕ್‌ಬೀ ಅವರ ಹೇಳಿಕೆಗಳು ಅಪಾಯಕಾರಿ ಮತ್ತು ಪ್ರಚೋದನಾಕಾರಿಯಾಗಿವೆ ಎಂದು ಖಂಡಿಸಿ ರವಿವಾರ ಜಂಟಿ ಹೇಳಿಕೆಯನ್ನು ಹೊರಡಿಸಿವೆ.

ಯುಎಇ ವಿದೇಶಾಂಗ ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಗೆ ಯುಎಇ, ಈಜಿಪ್ಟ್, ಜೋರ್ಡಾನ್, ಇಂಡೋನೇಶ್ಯಾ, ಪಾಕಿಸ್ತಾನ, ತುರ್ಕಿಯೆ, ಸೌದಿ ಅರೇಬಿಯ, ಖತರ್, ಕುವೈಟ್, ಒಮಾನ್, ಬಹರೈನ್, ಲೆಬನಾನ್, ಸಿರಿಯಾ ಮತ್ತು ಫೆಲೆಸ್ತೀನ್ ಸರಕಾರ ಹಾಗೂ ಇಸ್ಲಾಮಿಕ್ ಸಹಕಾರ ಸಂಘಟನೆ, ಅರಬ್ ಲೀಗ್ ಮತ್ತು ಗಲ್ಫ್ ಸಹಕಾರ ಮಂಡಳಿ ಸಹಿ ಹಾಕಿವೆ.

ಹಕ್‌ಬೀ ಹೇಳಿಕೆಗಳು ವಿಶ್ವಸಂಸ್ಥೆಯ ಸನ್ನದಿಗೆ ಮತ್ತು ಗಾಝಾ ಯುದ್ಧವನ್ನು ಶಮನಿಸುವ ಹಾಗೂ ಸಮಗ್ರ ಇತ್ಯರ್ಥಕ್ಕಾಗಿ ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಗಳಿಗೆ ವಿರುದ್ಧವಾಗಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುನ್ನ ಹಲವು ಅರಬ್ ದೇಶಗಳು ಪ್ರತ್ಯೇಕವಾಗಿ ಖಂಡನೆ ವ್ಯಕ್ತಪಡಿಸಿದ್ದವು.

ಹಕ್‌ಬೀ ಅವರ ಹೇಳಿಕೆಗಳೂ ಅವಿವೇಕತನ ಮತ್ತು ಬೇಜವ್ದಾರಿಯಿಂದ ಕೂಡಿವೆ ಎಂದು ಸೌದಿ ಅರೇಬಿಯ ಹೇಳಿದ್ದರೆ, ಇದು ಪ್ರದೇಶದಲ್ಲಿನ ದೇಶಗಳ ಸಾರ್ವಭೌಮತೆ ಮೇಲಿನ ದಾಳಿಯಾಗಿದೆ ಎಂದು ಜೋರ್ಡಾನ್ ಹೇಳಿತ್ತು.

ಹಕ್‌ಬೀ ಹೇಳಿಕೆಗಳು ಅಂತರರಾಷ್ಟ್ರೀಯ ಕಾನೂನಿನ ತತ್ವಗಳ ಸ್ಪಷ್ಟ ಉಲ್ಲಂಘನೆ ಎಂದು ಕುವೈಟ್ ಹೇಳಿದ್ದರೆ, ಈ ಹೇಳಿಕೆಗಳು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಭವಿತವ್ಯಕ್ಕೆ ಬೆದರಿಕೆಯನ್ನೊಡ್ಡಿವೆ ಎಂದು ಒಮಾನ್ ಆತಂಕ ವ್ಯಕ್ತಪಡಿಸಿತ್ತು.

ಅತಿಕ್ರಮಿತ ಫೆಲೆಸ್ತೀನ್ ಪ್ರದೇಶ ಅಥವಾ ಇತರ ಅರಬ್ ಭೂಭಾಗಗಳ ಮೇಲೆ ಇಸ್ರೇಲ್‌ಗೆ ಯಾವುದೇ ಸಾರ್ವಭೌಮ ಹಕ್ಕು ಇಲ್ಲ ಎಂದು ಈಜಿಪ್ಟ್‌ನ ವಿದೇಶಾಂಗ ಸಚಿವಾಲಯವು ಪುನರುಚ್ಚರಿಸಿದ್ದರೆ, ಫೆಲೆಸ್ತೀನ್ ಪ್ರಾಧಿಕಾರವು ಇಸ್ರೇಲ್‌ನೊಂದಿಗೆ ಪಶ್ಚಿಮ ದಂಡೆಯ ಸೇರ್ಪಡೆಯನ್ನು ತಿರಸ್ಕರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವಿಗೆ ಹಕ್‌ಬೀ ಹೇಳಿಕೆಗಳು ವಿರುದ್ಧವಾಗಿವೆ ಎಂದು ಹೇಳಿತ್ತು.

ಶನಿವಾರ ಹಕ್‌ಬೀ ಎಕ್ಸ್‌ನಲ್ಲಿಯ ಎರಡು ಪೋಸ್ಟ್‌ಗಳಲ್ಲಿ ಸಂದರ್ಶನದಲ್ಲಿ ಉಲ್ಲೇಖಿಸಲಾಗಿದ್ದ ಇತರ ವಿಷಯಗಳ ಕುರಿತು ತನ್ನ ನಿಲುವನ್ನು ಇನ್ನಷ್ಟು ಸ್ಪಷ್ಟಪಡಿಸಿದ್ದಾರೆ, ಆದರೆ ಬೈಬಲ್‌ನಲ್ಲಿಯ ವಾಕ್ಯದ ಕುರಿತು ತನ್ನ ಹೇಳಿಕೆಗಳಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries