ನವದೆಹಲಿ: ಇಲ್ಲಿನ ಭಾರತ್ ಮಂಟಪದಲ್ಲಿ ನಡೆದ ಅಂತರಾಷ್ಟ್ರೀಯ ಎಐ ಶೃಂಗಸಭೆಯ (AI Impact Summit) ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಶರ್ಟ್‌ಲೆಸ್ ಪ್ರತಿಭಟನೆ ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಈ ಕುರಿತು ಮಾತನಾಡಿರುವ ಬಿಜೆಪಿ ಸಂಸದ ಸಂಬಿತ್ ಪಾತ್ರಾ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಪಾತ್ರಾ, ಕಾಂಗ್ರೆಸ್ ಪಕ್ಷ ಇಂದು ತನ್ನ ಸಿದ್ಧಾಂತ ಮತ್ತು ಸಂಸ್ಕಾರ ಎರಡನ್ನೂ ಕಳೆದುಕೊಂಡಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ವರ್ಚಸ್ಸನ್ನು ಕುಗ್ಗಿಸಲು ಅವರು ತಮ್ಮ ಕಾರ್ಯಕರ್ತರನ್ನು ಅರೆಬೆತ್ತಲೆಯಾಗಿ ರಸ್ತೆಗೆ ಇಳಿಸಿದ್ದಾರೆ ಎಂದರು.
ಇದನ್ನೂ ಓದಿ:ದೇಶದ ಮರ್ಯಾದೆ ಹರಾಜು ಹಾಕಬೇಡಿ...ಅರಬೆತ್ತಲೆಯಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಿಎಂ ಯೋಗಿ ಗರಂ | AI Impact Summit
ಆ ಪಕ್ಷದ ಕಾರ್ಯಕರ್ತರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಕೆಡಿಸಲು ಶರ್ಟ್‌ಲೆಸ್ ಸಂಸ್ಕೃತಿಯನ್ನು ಆಶ್ರಯಿಸಿದ್ದಾರೆ. ಕಾಂಗ್ರೆಸ್ ಈಗ ಕೇವಲ ಟಾಪ್‌ಲೆಸ್ (ಅರೆಬೆತ್ತಲೆ) ಮಾತ್ರವಲ್ಲ, ಅದು ಬ್ರೈನ್‌ಲೆಸ್ (ಮೆದುಳಿಲ್ಲದ) ಮತ್ತು ಶೇಮ್‌ಲೆಸ್ (ನಾಚಿಕೆಯಿಲ್ಲದ) ಪಕ್ಷವಾಗಿ ಮಾರ್ಪಟ್ಟಿದೆ ಎಂದು ವ್ಯಂಗ್ಯವಾಡಿದರು.
ಈ ಪ್ರತಿಭಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ ಎಂದಿರುವ ಪಾತ್ರಾ, ಇದೊಂದು ವ್ಯವಸ್ಥಿತ ಸಂಚಾಗಿದ್ದು, ಈ ನಾಚಿಕೆಗೇಡಿನ ಕೃತ್ಯದ ಪ್ಲಾನ್ ನಡೆದಿದ್ದು ರಾಹುಲ್ ಗಾಂಧಿ ನಿವಾಸದಲ್ಲಿ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲೇ ಇದರ ರೂಪರೇಷೆ ಸಿದ್ಧವಾಗಿದೆ, ವಿದೇಶಿ ಪ್ರತಿನಿಧಿಗಳ ಮುಂದೆ ಭಾರತದ ವರ್ಚಸ್ಸನ್ನು ಕುಗ್ಗಿಸಲು ಕಾಂಗ್ರೆಸ್ ಹೈಕಮಾಂಡ್ ಈ ಹಂತಕ್ಕೆ ಇಳಿದಿದೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದಾರೆ.
ರಾಹುಲ್ ದೊಡ್ಡ ದೇಶದ್ರೋಹಿ
ಮುಂದುವರಿದು ಮಾತನಾಡಿದ ಸಂಸದ ಪಾತ್ರಾ, ರಾಹುಲ್ ಗಾಂಧಿಯನ್ನು ಅತಿದೊಡ್ಡ ದೇಶದ್ರೋಹಿ ಎಂದು ಕರೆದರು. ಯಾವೊಬ್ಬ ಭಾರತೀಯನೂ ತನ್ನ ರಾಷ್ಟ್ರದ ಬಗ್ಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಇಷ್ಟು ಕೀಳಾಗಿ ವರ್ತಿಸುವುದಿಲ್ಲ. ವಿಪಕ್ಷ ನಾಯಕರು ವಿದೇಶಿ ಶಕ್ತಿಗಳ ಜೊತೆಗೂಡಿ ಭಾರತದ ಅಭಿವೃದ್ಧಿಯನ್ನು ತಡೆಯಲು ಯತ್ನಿಸುತ್ತಿದ್ದಾರೆ. ಭಾರತವು ತಂತ್ರಜ್ಞಾನದಲ್ಲಿ ಮುಂಚೂಣಿಗೆ ಬರುತ್ತಿರುವುದನ್ನು ಸಹಿಸದೆ ಇಂತಹ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಘಟನೆಯ ಹಿನ್ನೆಲೆ
ಫೆಬ್ರವರಿ 20, 2026ರಂದು (ಶುಕ್ರವಾರ) ದೆಹಲಿಯ ಭಾರತ್ ಮಂಟಪದಲ್ಲಿ ಅಂತರಾಷ್ಟ್ರೀಯ ಮಟ್ಟದ ಕೃತಕ ಬುದ್ಧಿಮತ್ತೆ (AI) ಶೃಂಗಸಭೆ' ನಡೆಯುತ್ತಿತ್ತು. ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಮ್ಮ ಶರ್ಟ್‌ಗಳನ್ನು ಬಿಚ್ಚಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.

