HEALTH TIPS

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಬಂದಾಗ ನೆಹರೂ ಹೇಳಿದ್ದೇನು? ಇತಿಹಾಸ ಹೀಗಿದೆ

ನವದೆಹಲಿ: 1954ರಲ್ಲಿ ಅಂದಿನ ಸ್ಪೀಕರ್ ಜಿ.ವಿ. ಮಾವಲಂಕರ್ ಅವರನ್ನು ಪದಚ್ಯುತಗೊಳಿಸುವ ವಿರೋಧ ಪಕ್ಷದ ನಿರ್ಣಯದ ಕುರಿತು ಚರ್ಚೆಯ ಸಂದರ್ಭದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಪಕ್ಷಭೇದ ಮರೆತು ನಿರ್ಧಾರ ಕೈಗೊಳ್ಳುವಂತೆ ಕಾಂಗ್ರೆಸ್ ಸಂಸದರಿಗೆ ಸಂದೇಶ ನೀಡಿದ್ದರು.

ಯಾವುದೇ ವಿಪ್ ಅಥವಾ ನಿರ್ದೇಶನವನ್ನು ನೀಡಿರಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಲೋಕಸಭಾ ಸದಸ್ಯರು ಈ ವಿಷಯವನ್ನು ಪಕ್ಷದ ದೃಷ್ಟಿಯಿಂದ ನೋಡದೆ, ಸದನದ ಘನತೆಗೆ ಸಂಬಂಧಿಸಿದ ವಿಷಯವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದರು ಎಂದು ಅದು ಹೇಳಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷದ ನಿರ್ಣಯದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದ ಅಂತಹ ಮೂರು ಸಂದರ್ಭಗಳನ್ನು ಮೆಲುಕು ಹಾಕಬಹುದಾಗಿದೆ.

1954ರ ಡಿಸೆಂಬರ್ 18ರಂದು ವಿರೋಧ ಪಕ್ಷಗಳು ಅಂದಿನ ಸ್ಪೀಕರ್ ಮಾವಲಂಕರ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯ ಮಂಡಿಸಿದಾಗ ಅಂತಹ ಮೊದಲ ಪರಿಸ್ಥಿತಿ ನಿರ್ಮಾಣವಾಗಿತ್ತು. 50ಕ್ಕೂ ಹೆಚ್ಚು ಸದಸ್ಯರು ಪರವಾಗಿದ್ದರಿಂದ ನಿರ್ಣಯ ಅಂಗೀಕರಿಸಿ ಚರ್ಚೆ ನಡೆಸಲಾಗಿತ್ತು.

ಈ ಸಂದರ್ಭ ವಿರೋಧ ಪಕ್ಷಗಳಿಗೆ ಹೆಚ್ಚು ಸಮಯ ನೀಡುವಂತೆ ಸ್ವತಃ ಪ್ರಧಾನಿ ನೆಹರೂ ಸಭಾಧ್ಯಕ್ಷರ ಪೀಠವನ್ನು ಒತ್ತಾಯಿಸಿದ್ದರು ಎಂದು ವರದಿ ತಿಳಿಸಿದೆ.

ಅಲ್ಲಿ ನಡೆದ ಕಾವೇರಿದ ಚರ್ಚೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಕಡಿಮೆ ಸಂಖ್ಯೆಯಲ್ಲಿದ್ದರೂ ನೆಹರೂ ಅವರನ್ನು ತರಾಟೆಗೆ ತೆಗೆದುಕೊಂಡು ಸ್ಪೀಕರ್ ಅವರನ್ನು ಪಕ್ಷಪಾತಿ ಎಂದು ದೂಷಿಸಿದ್ದರು.

ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ್ದ ನೆಹರೂ, 'ನಾನು ಒಬ್ಬ ಬಹುಮತದ ಪಕ್ಷದ ನಾಯಕನಾಗಿ ಅಲ್ಲದೆ ಈ ಸದನದ ನಾಯಕನಾಗಿ ಸದನವನ್ನು ಉದ್ದೇಶಿಸಿ ಮಾತನಾಡಲು ಬಯಸುತ್ತೇನೆ. ಈ ಬಹುಮತದ ಪಕ್ಷದ ಸಂಸದರು ಯಾವುದೇ ವಿಪ್ ಅಥವಾ ನಿರ್ದೇಶನಕ್ಕೆ ಬದ್ಧರಲ್ಲ ಎಂದು ಅವರಿಗೆ ಹೇಳಲು ಬಯಸುತ್ತೇನೆ. ಅವರು ತಮ್ಮ ಇಚ್ಛೆಯಂತೆ ಮತ ಚಲಾಯಿಸಲಿ. ಇದು ಪಕ್ಷದ ವಿಷಯವಲ್ಲ. ಪಕ್ಷದ ದೃಷ್ಟಿಕೋನವನ್ನು ಹೊರತುಪಡಿಸಿ ಸದನದ ಘನತೆಗೆ ಸಂಬಂಧಿಸಿದ ವಿಷಯವಾಗಿ ಪರಿಗಣಿಸಬೇಕಾದ ವಿಷಯವಾಗಿದೆ. ಸಂಸತ್ತಿನ ಗೌರವದ ವಿಷಯಕ್ಕೆ ಸಂಬಂಧಿಸಿದಂತೆ ಇದು ಗಂಭೀರ ವಿಷಯ ಎಂದು ನೆಹರೂ ಹೇಳಿದ್ದರು'ಎಂದು ವರದಿ ಉಲ್ಲೇಖಿಸಿದೆ.

'ಸ್ಪೀಕರ್ ಬಗ್ಗೆ ನಾನು ಹೇಳಿದ್ದು, ಸ್ಪೀಕರ್ ಬಗ್ಗೆ ಏನು ನಿರ್ಣಯ ಕೈಗೊಳ್ಳಬೇಕೆಂಬುದು ಸದನದ ಪ್ರತಿಯೊಬ್ಬ ಸದಸ್ಯನಿಗೂ ಸಂಬಂಧಿಸಿದ್ದಾಗಿದೆ. ಸದನದ ಸದಸ್ಯರು ಇದನ್ನು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ, ಈ ವಿಷಯ ಸದನದ ಮುಂದೆ ಬಂದಾಗಿನಿಂದ ನನಗೆ ಬಹಳ ನೋವಾಗಿದೆ. ನಾವು ಸ್ಪೀಕರ್ ಅವರ ಬಗ್ಗೆ ಹಲವು ವರ್ಷಗಳಿಂದ ತಿಳಿದಿದ್ದೇವೆ. ಅವರ ಕಾರ್ಯನಿರ್ವಹಣೆಯನ್ನು ನೋಡಿದ್ದೇವೆ. ನಮ್ಮಲ್ಲಿ ಕೆಲವರು ಅವರ ಬಗ್ಗೆ ಇತರರಂತೆ ಒಂದೇ ರೀತಿಯ ಅಭಿಪ್ರಾಯ ಹೊಂದಿಲ್ಲದೇ ಇರಬಹುದು. ಆ ಸಾಧ್ಯತೆ ಇದೆ. ಅವರ ಒಂದು ನಿರ್ಣಯವನ್ನು ಇಷ್ಟಪಡದಿರುವುದು ಅಥವಾ ಅದರೊಂದಿಗೆ ಭಿನ್ನಾಭಿಪ್ರಾಯ ಹೊಂದುವುದು ಅಥವಾ ನಡೆದಿರುವ ಯಾವುದೋ ವಿಷಯದ ಬಗ್ಗೆ ಕಿರಿಕಿರಿ ಅನುಭವಿಸುವುದು ಸಹಜ. ಆದರೆ, ಈ ಸದನದ ಗೌರವವನ್ನು ಎತ್ತಿಹಿಡಿದಿರುವವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವುದು ಸಂಪೂರ್ಣವಾಗಿ ವಿಭಿನ್ನ ವಿಷಯ'ಎಂದು ನೆಹರು ಹೇಳಿದ್ದರು.

'ನಾವು ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದಾಗ, ನಾವು ನಮ್ಮ ದೇಶವಾಸಿಗಳಿಗೆ ದ್ರೋಹ ಮಾಡಿದಂತೆ. ವಾಸ್ತವವಾಗಿ ಪ್ರಪಂಚದ ಮುಂದೆ ನಾವು ಚಿಕ್ಕವರಾಗಿ ಕಾಣುತ್ತೇವೆ. ಅದು ಪರಿಸ್ಥಿತಿಯ ಗಂಭೀರತೆಯಾಗಿದೆ. ನಾವು ಜಗತ್ತಿಗೆ ಮತ್ತು ನಮ್ಮ ದೇಶದ ಜನರ ಮುಂದೆ ನಾವು ಏನೆಂದು ತೋರಿಸಿಕೊಳ್ಳುತ್ತಿದ್ದೇವೆ. ನಾವು ಜಗಳಗಂಟರು, ನಮ್ಮ ನಿರ್ಣಯದ ಪರಿಣಾಮ ತಿಳಿಯದೇ ಕ್ಷುಲ್ಲಕವಾಗಿ ನಡೆದುಕೊಳ್ಳುತ್ತೇವೆ ಎಂದು ಜನರ ಮುಂದೆ ಪ್ರದರ್ಶಿಸಿಕೊಳ್ಳಲು ಬಯಸುತ್ತೀರೋ ಅದು ನಿಮಗೆ ಬಟ್ಟಿದ್ದು' ಎಂದು ಹೆಳಿದ್ದರು ಎಂದು ವರದಿ ತಿಳಿಸಿದೆ.

'ಸ್ಪೀಕರ್ ವಿರುದ್ಧ ಪದಚ್ಯುತಿ ನಿರ್ಣಯ ಸಾಧ್ಯವಿಲ್ಲ ಎಂದು ನಾನು ಹೆಳಲಾರೆ. ಏಕೆಂದರೆ, ಸಂವಿಧಾನ ಈ ಹಕ್ಕನ್ನು ನೀಡಿದೆ/ ಈ ನಿರ್ಣಯ ಮುಂದಿಟ್ಟಿರುವ ವಿರೋಧ ಪಕ್ಷ ಅಥವಾ ಯಾವುದೇ ಸದಸ್ಯನ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಸಂವಿಧಾನ ನೀಡಿರುವ ಹಕ್ಕನ್ನು ನಾನು ತಳ್ಳಿಹಾಕುವುದಿಲ್ಲ. ಆದೆ, ಇದು ಕಾನೂನಿನ ಹಕ್ಕಿನನ ವಿಷಯವಲ್ಲ ನಿರ್ಣಯದ ಹಿಂದಿನ ಔಚಿತ್ಯ ಮತ್ತು ಉದ್ದೇಶ ಮುಖ್ಯವಾಗುತ್ತದೆ' ಎಂದೂ ನೆಹರೂ ಪ್ರತಿಪಾದಿಸಿದ್ದರು.

ನಾನು ವಿರೋಧ ಪಕ್ಷಗಳ ಸದಸ್ಯರು ಮಾಡಿದ ಹಲವು ಭಾಷಣಗಳನ್ನು ಆಲಿಸಿದ್ದೇನೆ. ಅವುಗಳು ಅಸಮರ್ಥ, ಕ್ಷುಲ್ಲಕ ಮತ್ತು ಸತ್ವದ ಕೊರತೆಯಿಂದ ಕೂಡಿದ್ದ ಮಾತುಗಳಾಗಿದ್ದವು ಎಂದ ನೆಹರೂ ಸ್ಪೀಕರ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಸ್ಪೀಕರ್ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಕ್ಕಾಗಿ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಆ ಸಂದರ್ಭ ಕಾಂಗ್ರೆಸ್ 360ಕ್ಕೂ ಹೆಚ್ಚು ಸದಸ್ಯರೊಂದಿಗೆ ಪ್ರಚಂಡ ಬಹುಮತವನ್ನು ಹೊಂದಿತ್ತು. ವಿರೋಧ ಪಕ್ಷಗಳ ಪದಚ್ಯುತಿ ನಿರ್ಣಯವನ್ನು ಧ್ವನಿ ಮತದ ಮೂಲಕ ನಿರಾಕರಿಸಲಾಗಿತ್ತು.

1966ರಲ್ಲಿ, ಸ್ಪೀಕರ್ ಸರ್ದಾರ್ ಹುಕಮ್ ಸಿಂಗ್ ವಿರುದ್ಧದ ನಿರ್ಣಯವು ಅಗತ್ಯವಾದ 50 ಸದಸ್ಯರ ಕಡ್ಡಾಯ ಬೆಂಬಲ ಇಲ್ಲದ ಕಾರಣ ಚರ್ಚೆಗೆ ಅಂಗೀಕರಿಸದೇ ಬಿದ್ದುಹೋಗಿತ್ತು.

1987ರ ಏಪ್ರಿಲ್ 15ರಂದು ವಿರೋಧ ಪಕ್ಷದವರು ಅಂದಿನ ಸ್ಪೀಕರ್ ಬಲರಾಮ್ ಜಾಖರ್ ಅವರನ್ನು ಪದಚ್ಯುತಗೊಳಿಸಲು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ್ದ ರಾಜೀವ್ ಗಾಂಧಿ, 1954ರ ನಿರ್ಣಯದ ಸಂದರ್ಭ ನೆಹರೂ ಅವರು ನೀಡಿದ್ದ ಹೇಳಿಕೆಯನ್ನು ಎರಡೆರಡು ಬಾರಿ ಪ್ರಸ್ತಾಪಿಸಿದ್ದರು. ಸ್ಪೀಕರ್ ಪ್ರಮಾಣಿಕತೆ ಪ್ರಶ್ನಿಸಿದ್ದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಧ್ವನಿ ಮತದ ಮೂಲಕ ನಿರ್ಣಯಕ್ಕೆ ಸೋಲಾಗಿತ್ತು.

2024ರ ಡಿಸೆಂಬರ್‌ನಲ್ಲಿ ಅಂದಿನ ರಾಜ್ಯಸಭಾ ಸ್ಪೀಕರ್ ಆಗಿದ್ದ ಜಗದೀಪ್ ಧನಕರ್ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದ ವಿರೋಧ ಪಕ್ಷಗಳು ಅವರ ಪದಚ್ಯುತಿಗೆ ಒತ್ತಾಯಿಸಿ ನೋಟಿಸ್ ನೀಡಿದ್ದವು. ಪ್ರಾಥಮಿಕ ಹಂತದಲ್ಲೇ ಅದನ್ನು ತಿರಸ್ಕರಿಸಲಾಗಿತ್ತು.

ಸದ್ಯ, ಲೋಕಸಭಾ ಅಧ್ಯಕ್ಷರಾಗಿರುವ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಕೋರಿ ವಿರೋಧ ಪಕ್ಷದ ಸದಸ್ಯರು ಕಳೆದ ಮಂಗಳವಾರ ನೋಟಿಸ್ ನೀಡಿದ್ದು, ಮಾರ್ಚ್ 9ರಿಂದ ಬಜೆಟ್ ಅಧಿವೇಶನದ ಎರಡನೇ ಹಂತ ಆರಂಭವಾದಾಗ ಇದನ್ನು ಪಟ್ಟಿ ಮಾಡಲಾಗುತ್ತದೆ. ನಿಯಮಗಳ ಪ್ರಕಾರ, ತ್ವರಿತ ಪರಿಶೀಲನೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries