ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕಾವನ್ನು ಸರ್ವಾಧಿಕಾರಿ ರಾಷ್ಟ್ರವಾಗಿ ಪರಿವರ್ತಿಸುತ್ತಿದ್ದಾರೆ ಎಂದು `ಹ್ಯೂಮನ್ ರೈಟ್ಸ್ ವಾಚ್(ಎಚ್‍ಆರ್‍ಡಬ್ಲ್ಯೂ) ಎಚ್ಚರಿಕೆ ನೀಡಿದ್ದು ಅಮೆರಿಕಾದಲ್ಲಿ ಪ್ರಜಾಪ್ರಭುತ್ವವು ನಾಲ್ಕು ದಶಕಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಎಂಬ ವರದಿಯನ್ನು ಉಲ್ಲೇಖಿಸಿದ್ದಾರೆ.
ಶ್ವೇತಭವನಕ್ಕೆ ಟ್ರಂಪ್ ಹಿಂತಿರುಗಿರುವುದು ಈಗಾಗಲೇ ಚೀನಾ ಮತ್ತು ರಶ್ಯದಿಂದ ಒತ್ತಡದಲ್ಲಿದ್ದ ಮಾನವ ಹಕ್ಕುಗಳ ಸತತ ಅವನತಿಯನ್ನು ಪ್ರಚೋದಿಸಿದೆ. ನಿಯಮಾಧಾರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಹತ್ತಿಕ್ಕಲಾಗಿದೆ ಎಂದು ನ್ಯೂಯಾರ್ಕ್ ಮೂಲದ ವಕಾಲತ್ತು ಮತ್ತು ಸಂಶೋಧನಾ ಗುಂಪು ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಅಮೆರಿಕಾದಲ್ಲಿ ಟ್ರಂಪ್ ಮಾನವ ಹಕ್ಕುಗಳಿಗೆ ಸ್ಪಷ್ಟ ನಿರ್ಲಕ್ಷ್ಯ ತೋರಿದ ಜೊತೆಗೆ ತೀವ್ರ ಉಲ್ಲಂಘನೆ ನಡೆಸಿದ್ದಾರೆ ಎಂದು ವರದಿ ಹೇಳಿದ್ದು ಕೆಲವು ರಾಜ್ಯಗಳಲ್ಲಿ ನಿಯೋಜಿಸಿರುವ ವಲಸೆ ಮತ್ತು ಸುಂಕ ಜಾರಿ ಏಜೆನ್ಸಿ(ಐಸಿಇ)ಯ ಮಾಸ್ಕ್ ಧರಿಸಿದ ಸಶಸ್ತ್ರ ಸಿಬ್ಬಂದಿಗಳು ನೂರಾರು ಅನಗತ್ಯ ಹಿಂಸಾತ್ಮಕ ಮತ್ತು ನಿಂದನೀಯ ದಾಳಿಗಳನ್ನು ನಡೆಸಿದ್ದಾರೆ ಎಂದು ಉಲ್ಲೇಖಿಸಿದೆ.
ಅಧಿಕಾರವನ್ನು ಕಸಿದುಕೊಳ್ಳುವ ಉದ್ದೇಶದಿಂದ ನ್ಯಾಷನಲ್ ಗಾರ್ಡ್ ಪಡೆಗಳ ದೇಶೀಯ ನಿಯೋಜನೆ, ರಾಜಕೀಯ ಶತ್ರುಗಳು ಮತ್ತು ಈಗ ತನ್ನನ್ನು ಟೀಕಿಸುತ್ತಿರುವ ಮಾಜಿ ಅಧಿಕಾರಿಗಳ ವಿರುದ್ಧ ಪ್ರತೀಕಾರದ ಪುನರಾವರ್ತಿತ ಕ್ರಮಗಳು, ಹಾಗೆಯೇ ಬೆದರಿಸುವ ಪ್ರಕ್ರಿಯೆಗಳಿಗೆ ಕಾರ್ಯಾಂಗದ ಅಧಿಕಾರವನ್ನು ವಿಸ್ತರಿಸುವ ಕ್ರಮಗಳು, ಇಲಾಖೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ತಟಸ್ಥಗೊಳಿಸಿರುವುದು ಅಮೆರಿಕಾ ನಿರಂಕುಶಾಧಿಕಾರದತ್ತ ಬದಲಾವಣೆಗೊಳ್ಳುತ್ತಿದೆ ಎಂಬುದನ್ನು ನಿರ್ಧರಿಸಲು ಆಧಾರವಾಗಿದೆ' ಎಂದು ವರದಿ ಹೇಳಿದೆ.
ವೆನೆಝುವೆಲಾದ 252 ವಲಸಿಗರನ್ನು ಎಲ್ ಸಲ್ವದೋರ್‌ನಲ್ಲಿ ಗರಿಷ್ಠ ಭದ್ರತೆಯ ಜೈಲಿಗೆ ಕಳುಹಿಸುವ ಮೂಲಕ ಅಮೆರಿಕಾವು ಬಲವಂತದ ನಾಪತ್ತೆಗಳಲ್ಲಿ ತೊಡಗಿದ್ದು ಇದು ಅಂತಾರಾಷ್ಟ್ರೀಯ ಕಾನೂನಿನಡಿ ಅಪರಾಧವಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.

