HEALTH TIPS

LDF ಸರ್ಕಾರದ ಆದೇಶದ ಮೇರೆಗೆ ಶಬರಿಮಲೆ ತನಿಖೆಯ ಮಾಹಿತಿ ಸೋರಿಕೆ: ಕಾಂಗ್ರೆಸ್ ಸಂಸದ

ಕೊಲ್ಲಂ: ಶಬರಿಮಲೆ ಚಿನ್ನ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯ ಕೆಲ ಅಧಿಕಾರಿಗಳು ಎಲ್‌ಡಿಎಫ್ ಸರ್ಕಾರದ ಆದೇಶದ ಮೇರೆಗೆ ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ಯುಡಿಎಫ್ ಸಂಚಾಲಕರೂ ಆಗಿರುವ ಸಂಸದ ಅಡೂರ್ ಪ್ರಕಾಶ್ ಆರೋಪಿಸಿದ್ದಾರೆ. 




ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉನ್ನಿಕೃಷ್ಣನ್ ಪೋಟಿ ಜೊತೆಗೆ ನಂಟು ಹೊಂದಿದ್ದ ಆರೋಪದಲ್ಲಿ ಅಡೂರ್ ಪ್ರಕಾಶ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಿತ್ತು. ಈ ಸಂಬಂಧ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

'ತನಿಖೆಯ ಮಾಹಿತಿ ಸೋರಿಕೆ ಮಾಡಬೇಕೆಂದು ಎಸ್‌ಐಟಿಯ ಕೆಲವು ಅಧಿಕಾರಿಗಳಿಗೆ ನಿರ್ದೇಶನ ಇದ್ದು, ಅವರು ಅದನ್ನು ಪಾಲಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

'ಎಸ್‌ಐಟಿಯ ಹಿರಿಯ ಅಧಿಕಾರಿಗಳು ಇದನ್ನು ಮಾಡುತ್ತಿದ್ದಾರೆ ಎನ್ನುವ ನಂಬಿಕೆ ಇಲ್ಲ. ಆದರೆ ಕೆಲವು ಅಧಿಕಾರಿಗಳಿಗೆ ಈ ಕೆಲಸ ವಹಿಸಲಾಗಿದೆ' ಎಂದಿದ್ದಾರೆ.

'ನಾನು ಎಸ್‌ಐಟಿ ಮುಂದೆ ಹಾಜರಾಗಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನ್ನನ್ನು ವಿಚಾರಣೆ ಮಾಡುವಾಗ ಪೋಟಿ ಹಾಜರಿದ್ದ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಅದು ಸತ್ಯವಲ್ಲ. ಇಂಥವುಗಳನ್ನು ಹರಡಲು ಎಸ್‌ಐಟಿಯ ಕೆಲವು ಅಧಿಕಾರಿಗಳಿಗೆ ಎಲ್‌ಡಿಎಫ್ ಸರ್ಕಾರ ಹೊಣೆ ನೀಡಿದೆ' ಎಂದು ಅವರು ಆರೋಪಿಸಿದ್ದಾರೆ.

ಮಾಹಿತಿ ಸೋರಿಕೆ ಮಾಡಿದ ಅಧಿಕಾರಿಗಳ ಹೆಸರನ್ನು ಸಮಯ ಬಂದಾಗ ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ. ಆ ಅಧಿಕಾರಿಗಳ ಕೃತ್ಯವನ್ನು ಜಗಜ್ಜಾಹೀರು ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಶಬರಿಮಲೆ ಚಿನ್ನಗಳವು ಪ್ರಕರಣ ರಾಜಕೀಯ ಪ್ರೇರಿತ ಎಂದೂ ಅವರು ದೂರಿದ್ದಾರೆ.

'ಎಸ್‌ಐಟಿಗೆ ವಹಿಸಿರುವ ಜವಾಬ್ದಾರಿ ಏನು? ನಿರ್ದೇಶಿಸಿದ ಪ್ರಕಾರ ತನಿಖೆ ನಡೆಸುವುದು ಬಿಟ್ಟು, ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ' ಎಂದು ಹೇಳಿದ್ದಾರೆ.

ಚಿನ್ನಗಳವು ಪ್ರಕರಣವನ್ನು ಯುಡಿಎಫ್‌ ಬಯಲಿಗೆಳೆದ ಬಳಿಕ ಎಸ್‌ಐಟಿ ರಚಿಸಲು ಕೇರಳ ಹೈಕೋರ್ಟ್ ನಿರ್ದೇಶಿಸಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

'‌ಆದರೆ ಬಳಿಕ ಕೆಲವು ಅಧಿಕಾರಿಗಳನ್ನು ಎಸ್‌ಐಟಿಗೆ ಸೇರಿಸಲಾಯಿತು. ಇದೇ ನಮಗೆ ಸಂಶಯ ಉಂಟು ಮಾಡಿತ್ತು. ತನಿಖೆಯ ಹಾದಿ ತಪ್ಪಿಸಲು ಸುಳ್ಳುಗಳನ್ನು ಹರಡಲಾಗುತ್ತಿದೆ' ಎಂದು ಹೇಳಿದ್ದಾರೆ.

'ವಿಚಾರಣೆ ನಡೆದ ಬಳಿಕ ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಹಿಂಬಾಗಿಲಿನ ಮೂಲಕ ತೆರಳಿ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು. ಆದರೆ ನಾನು ಅವರ ಮಾತನ್ನು ಧಿಕ್ಕರಿಸಿ ಮುಖ್ಯದ್ವಾರದಿಂದಲೇ ಬಂದೆ' ಎಂದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries