ಜೋಧಪುರ: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಪತಿಯ ಸಂಬಳದ ವಿವರಗಳನ್ನು ಮಾಹಿತಿ ಹಕ್ಕು (RTI) ಕಾಯ್ದೆಯಡಿ ಬಹಿರಂಗಪಡಿಸುವಂತೆ ಕೋರಿ ಪತ್ನಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ನ ಜೋಧಪುರ ಪ್ರಧಾನ ಪೀಠ ವಜಾಗೊಳಿಸಿದೆ.
ಕೋರಲಾದ ಮಾಹಿತಿ "ವೈಯಕ್ತಿಕ ಮಾಹಿತಿ"ಯಾಗಿದ್ದು, RTI ಕಾಯ್ದೆಯಡಿ ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ಪಡೆದಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಗುರುವಾರ ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರು, ಅರ್ಜಿದಾರರು ಕೋರಿದ ಮಾಹಿತಿಯನ್ನು ಒದಗಿಸಲು ನಿರಾಕರಿಸಿದ ಅಧಿಕಾರಿಗಳ ನಿರ್ಧಾರದಲ್ಲಿ ಯಾವುದೇ ಕಾನೂನಿನ ಉಲ್ಲಂಘನೆ ಕಂಡುಬಂದಿಲ್ಲ ತಿಳಿಸಿದ್ದಾರೆ. ಹೀಗಾಗಿ, ಸಂಬಂಧಿತ ಆದೇಶಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಅರ್ಜಿದಾರರಾದ ಕಾಂತಾ ಕುಮಾವತ್ ಅವರು ಅಕ್ಟೋಬರ್ 23, 2024ರಂದು ರಾಜಸ್ಥಾನ ರಾಜ್ಯ ಮಾಹಿತಿ ಆಯೋಗ ನೀಡಿದ ಮಾಹಿತಿ ನಿರಾಕರಣಾ ಆದೇಶವನ್ನು ಪ್ರಶ್ನಿಸಿ ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಎಪ್ರಿಲ್ 9, 2024ರಂದು ಸಲ್ಲಿಸಿದ ತಮ್ಮ RTI ಅರ್ಜಿಯಲ್ಲಿ ಕೋರಿದ್ದ ಮಾಹಿತಿಯನ್ನು ನೀಡುವಂತೆ ಹಾಗೂ ಇತರ ಸೂಕ್ತ ಪರಿಹಾರ ಒದಗಿಸುವಂತೆ ಭಿಲ್ವಾರ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿದ್ದರು.
ಪ್ರಕರಣದಲ್ಲಿ ಪ್ರತಿವಾದಿಗಳಾಗಿ ರಾಜಸ್ಥಾನ ರಾಜ್ಯ ಮಾಹಿತಿ ಆಯೋಗ, ಭಿಲ್ವಾರದ ಪೊಲೀಸ್ ವರಿಷ್ಠಾಧಿಕಾರಿ, ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿ ಹಾಗೂ ಭಿಲ್ವಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಸೇರಿದ್ದರು.
ಅರ್ಜಿದಾರರು ಭಿಲ್ವಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ತಮ್ಮ ಪತಿ ಓಂ ಪ್ರಕಾಶ್ ಅವರ ಜನವರಿಯಿಂದ ಮಾರ್ಚ್ 2024ರವರೆಗಿನ ಪೇ ಸ್ಲಿಪ್ ಗಳು ಮತ್ತು ಸಂಬಳದ ವಿವರಗಳ ಪ್ರತಿಗಳನ್ನು ಕೋರಿದ್ದರು. ಆದರೆ, ಮೂರನೇ ವ್ಯಕ್ತಿಗೆ ಸಂಬಂಧಿಸಿದ ಹಾಗೂ ವೈಯಕ್ತಿಕ ಸ್ವರೂಪದ ಮಾಹಿತಿಯಾಗಿರುವುದರಿಂದ RTI ಕಾಯ್ದೆಯಡಿ ಅದಕ್ಕೆ ವಿನಾಯಿತಿ ಇದೆ ಎಂಬ ಕಾರಣ ನೀಡಿ ಜೂನ್ 26, 2024 ಮತ್ತು ಅಕ್ಟೋಬರ್ 23, 2024ರಂದು ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು.
ವಿಚಾರಣೆ ವೇಳೆ ನ್ಯಾಯಾಲಯ, ಉದ್ಯೋಗಿಯ ಸೇವಾ ಸಂಬಂಧಿತ ಮಾಹಿತಿ ಮೂಲತಃ ಉದ್ಯೋಗದಾತ ಮತ್ತು ಉದ್ಯೋಗಿಯ ನಡುವಿನ ವಿಷಯವಾಗಿದ್ದು, ಅದು ವೈಯಕ್ತಿಕ ಮಾಹಿತಿಯ ವ್ಯಾಪ್ತಿಗೆ ಒಳಪಡುವುದಾಗಿ ಅಭಿಪ್ರಾಯಪಟ್ಟಿದೆ. ಯಾವುದೇ ಪ್ರಮುಖ ಸಾರ್ವಜನಿಕ ಹಿತಾಸಕ್ತಿ ಇಲ್ಲದ ಸಂದರ್ಭದಲ್ಲಿ ಇಂತಹ ವಿವರಗಳನ್ನು ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರತಿವಾದಿಗಳ ಕ್ರಮದಲ್ಲಿ ಯಾವುದೇ ದೌರ್ಬಲ್ಯ ಕಂಡುಬಂದಿಲ್ಲ ಎಂದು ಹೇಳಿದ ನ್ಯಾಯಾಲಯ, ಅರ್ಹತೆಯಿಲ್ಲದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.

