ಡೊನಾಲ್ಡ್ ಟ್ರಂಪ್ ಆಡಳಿತವು ವಿಧಿಸಿರುವ ಪಾರಸ್ಪರಿಕ ಸುಂಕಗಳನ್ನು ಅಮೆರಿಕ ಸುಪ್ರೀಂಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯ ಈ ಹೇಳಿಕೆ ನೀಡಿದೆ.
ಗುರುವಾರ 9 ಮಂದಿ ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು 6-3 ಬಹುಮತದ ತೀರ್ಪಿನಲ್ಲಿ, ಅಮೆರಿಕ ಸಂಸತ್ತಿನ ಅನುಮೋದನೆಯಿಲ್ಲದೆ ಟ್ರಂಪ್ ಆಡಳಿತವು ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ (ಐಇಇಪಿಎ)ಯಡಿ ಸುಂಕಗಳನ್ನು ವಿಧಿಸಲು ಸಾಧ್ಯವಿಲ್ಲವೆಂದು ಅಮೆರಿಕದ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ತೀರ್ಪು ನೀಡಿದ್ದಾರೆ.
"ಅಮೆರಿಕದ ಸುಪ್ರೀಂಕೋರ್ಟ್ ಶುಕ್ರವಾರ ಸುಂಕಗಳ ಕುರಿತು ನೀಡಿದ ತೀರ್ಪನ್ನು ನಾವು ಗಮನಿಸಿದ್ದೇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ" ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
►"ನಾನು ದೇಶವನ್ನೇ ನಾಶಪಡಿಸಬಹುದು; ಆದರೆ 1 ಡಾಲರ್ ಸುಂಕವೂ ಹೇರುವಂತಿಲ್ಲ"
ಸುಪ್ರೀಂಕೋರ್ಟ್ ತೀರ್ಪನ್ನು ಮೂದಲಿಸಿದ ಟ್ರಂಪ್ ಅವರು, "ನಾನು ವ್ಯಾಪಾರವನ್ನು ನಾಶಪಡಿಸಬಹುದು. ಒಂದು ದೇಶವನ್ನೇ ನಾಶಪಡಿಸಬಹುದು. ವಿದೇಶಿ ರಾಷ್ಟ್ರವೊಂದರ ಮೇಲೆ ದಿಗ್ಭಂಧನ ಹೇರಬಹುದು. ನಾನು ಬಯಸಿದುದನ್ನು ಮಾಡಬಹುದು. ಆದರೆ 1 ಡಾಲರ್ ಸುಂಕವನ್ನೂ ವಿಧಿಸಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ಹೇಳುತ್ತದೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
►'ಕಾನೂನುಬಾಹಿರ' ಸುಂಕದ ಮೊತ್ತವನ್ನು ಟ್ರಂಪ್ ಆಡಳಿತ ಮರುಪಾವತಿಸಲಿದೆಯೇ?
ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ (ಐಇಇಪಿಎ)ಯಡಿ ಟ್ರಂಪ್ ಆಡಳಿತವು ವಿದೇಶಿ ಆಮದು ಉತ್ಪನ್ನಗಳಿಗೆ ವಿಧಿಸಿದ ಸುಂಕದ ಪರಿಣಾಮವಾಗಿ ಅಮೆರಿಕ ಕಳೆದ ವರ್ಷದಿಂದ 175 ಶತಕೋಟಿ ಡಾಲರ್ಗೂ ಅಧಿಕ ಆದಾಯ ಗಳಿಸಿದೆ. ಇದೀಗ ಸುಪ್ರೀಂಕೋರ್ಟ್, ಐಇಇಪಿಎ ಕಾಯ್ದೆಯಡಿ ಹೇರಿರುವ ಸುಂಕವು ಅಸಾಂವಿಧಾನಿಕವೆಂದು ಘೋಷಿಸಿರುವುದರಿಂದ ಟ್ರಂಪ್ ಆಡಳಿತವು ಈ ಹಣವನ್ನು ರಫ್ತು ದೇಶಗಳಿಗೆ ಮರುಪಾವತಿಸುವುದೇ ಎಂಬ ಪ್ರಶ್ನೆ ಮೂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್ ಅವರು, ಮರುಪಾವತಿ ಪ್ರಕ್ರಿಯೆ ತಕ್ಷಣ ಆರಂಭವಾಗುವುದಿಲ್ಲ. ಅದಕ್ಕೆ ಒಂದೆರಡು ವರ್ಷಗಳು ಬೇಕಾಗಬಹುದು ಎಂದಿದ್ದಾರೆ.
►ಅಮೆರಿಕದ ನ್ಯಾಯಾಲಯ ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತ: ಟ್ರಂಪ್ ಆಕ್ರೋಶ
ಐಇಇಪಿಎ ಕಾಯ್ದೆಯಡಿ ತನ್ನ ಆಡಳಿತವು ವಿವಿಧ ದೇಶಗಳಿಗೆ ಸುಂಕ ವಿಧಿಸಿರುವುದನ್ನು ರದ್ದುಪಡಿಸಿದ ಅಮೆರಿಕ ಸುಪ್ರೀಂಕೋರ್ಟ್ ತೀರ್ಪಿಗೆ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದ ನ್ಯಾಯಾಲಯ ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ ಎಂದು ಅವರು ಆಪಾದಿಸಿದ್ದಾರೆ.
ನ್ಯಾಯಾಲಯದ ಕೆಲವು ಸದಸ್ಯರಿಗೆ ದೇಶದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳುವ ಧೈರ್ಯವಿಲ್ಲದಿರುವುದು ಲಜ್ಜೆಗೇಡಿತನವಾಗಿದೆ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ನಮ್ಮ ದೇಶವನ್ನು ರಕ್ಷಿಸುವ ಉದ್ದೇಶದಿಂದ, ಈ ಹಿಂದೆ ವಿಧಿಸಿರುವುದಕ್ಕಿಂತ ಹೆಚ್ಚು ಮೊತ್ತದ ಸುಂಕವನ್ನು ಅಧ್ಯಕ್ಷನಾಗಿ ನಾನು ವಿಧಿಸಬಹುದು. ನ್ಯಾಯಾಲಯದ ಈ ತೀರ್ಪು ನನ್ನನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಿದೆ" ಎಂದು ಅವರು ಹೇಳಿದ್ದಾರೆ.
ಐಇಇಪಿಎ ಕಾಯ್ದೆಯಡಿ ಸುಂಕ ಹೇರಿಕೆ ಅಸಾಂವಿಧಾನಿಕವೆಂದು ಅಮೆರಿಕ ಸರ್ಕಾರದ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರ ಪೈಕಿ ಇಬ್ಬರನ್ನು ಡೊನಾಲ್ಡ್ ಟ್ರಂಪ್ ಅವರೇ ನೇಮಿಸಿದ್ದರು.

