ನವದೆಹಲಿ: ಕಳೆದ ದಶಕದಲ್ಲಿ 10,000ಕ್ಕೂ ಹೆಚ್ಚು ಮಾವೋವಾದಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದು, ಅವರ ಉನ್ನತ ನಾಯಕರನ್ನು ಹತ್ಯೆ ಮಾಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ನಕ್ಸಲ್ ವಾದ ನಿರ್ಮೂಲನೆ ಮಾಡಲು ಕೇಂದ್ರ ಗೃಹ ಸಚಿವಾಲಯವು ಮಾರ್ಚ್ 31ರ ಗಡುವು ವಿಧಿಸಿತ್ತು.
2014 ರಿಂದ 2026ರವರೆಗಿನ ಅಧಿಕೃತ ಅಂಕಿಅಂಶಗಳ ಪ್ರಕಾರ, 2025 ರಲ್ಲಿ 2,300 ಮಾವೋವಾದಿಗಳು ಶರಣಾಗಿದ್ದಾರೆ ಮತ್ತು 2026ರ ಮೊದಲ ಮೂರು ತಿಂಗಳಲ್ಲಿ 630 ಕ್ಕೂ ಹೆಚ್ಚು ಮಂದಿ ಶಸ್ತ್ರಾಸ್ತ್ರ ಬಿಟ್ಟು ಮುಖ್ಯವಾಹಿನಿಗೆ ಬಂದಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಠಾಣೆಗಳ ಸಂಖ್ಯೆ 2014 ರಲ್ಲಿ 66 ಇತ್ತು. ಕಳೆದ 10 ವರ್ಷಗಳಲ್ಲಿ 586 ಕ್ಕೆ ಏರಿದೆ. ಕಳೆದ 6 ವರ್ಷಗಳಲ್ಲಿ 361 ಹೊಸ ಭದ್ರತಾ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಕಾರ್ಯಾಚರಣೆಯ ವ್ಯಾಪ್ತಿಯನ್ನು ಬಲಪಡಿಸಲು 68 ನೈಟ್-ಲ್ಯಾಂಡಿಂಗ್ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ನಕ್ಸಲ್ ಸಂಬಂಧ ದೂರು ದಾಖಲಾಗುವ ಪೊಲೀಸ್ ಠಾಣೆಗಳ ಸಂಖ್ಯೆ 2013 ರಲ್ಲಿ 76 ಜಿಲ್ಲೆಗಳ 330 ಇದ್ದರೆ, ಜೂನ್ 2025 ರ ವೇಳೆಗೆ ಕೇವಲ 22 ಜಿಲ್ಲೆಗಳಲ್ಲಿ 52 ಠಾಣೆಗಳಿವೆ.
ಛತ್ತೀಸಗಢದಲ್ಲಿ ಮಾವೋವಾದಿ ಚಳುವಳಿಯ ನಾಯಕತ್ವ ಶೂನ್ಯವಾಗಿದೆ. ಈ ಹಿಂದೆ ಮಾವೋವಾದಿಗಳು ಹಿಡಿತ ಸಾಧಿಸಿದ್ದ ಪ್ರದೇಶಗಳಲ್ಲಿ, ಈಗ ಸರ್ಕಾರದ ಯೋಜನೆಗಳು ಜನರನ್ನು ತಲುಪುತ್ತಿವೆ.. ಪಿಎಂ-ಆವಾಸ್ ಯೋಜನೆಯಡಿ ಮಂಜೂರಾದ ಮನೆಗಳ ಸಂಖ್ಯೆಯು ಮಾರ್ಚ್ 2024 ರಲ್ಲಿ 92,847 ಇತ್ತು, ಅದು ಅಕ್ಟೋಬರ್ 2025 ರಲ್ಲಿ 2,54,045 ಕ್ಕೆ ಏರಿದೆ. ಇದೇ ಅವಧಿಯಲ್ಲಿ ಆಧಾರ್ ನೋಂದಣಿ ಮತ್ತು ಆಯುಷ್ಮಾನ್ ಕಾರ್ಡ್‌ಗಳ ವಿತರಣೆಯಲ್ಲೂ ಗಣನೀಯ ಪ್ರಗತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

