ನವದೆಹಲಿ: 11 ವರ್ಷಗಳಲ್ಲಿ 'ಜಲ ಸಂಚಯ ಅಭಿಯಾನ'ದ ಅಡಿ ದೇಶದಾದ್ಯಂತ ಸುಮಾರು 50 ಲಕ್ಷ ಕೃತಕ ಮಳೆನೀರು ಸಂಗ್ರಹ ರಚನೆಗಳನ್ನು ಮತ್ತು 'ಅಮೃತ ಸರೋವರ ಅಭಿಯಾನ'ದ ಅಡಿಯಲ್ಲಿ 70,000 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ, ನೀರಿನ ಸಂರಕ್ಷಣೆಗೆ ಬದ್ಧತೆಗೆ ಹೆಚ್ಚು ಒತ್ತು ಸಮಯ ಬಂದಿದೆ ಎಂದು ಪ್ರಧಾನಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಹೇಳಿದ್ದಾರೆ.
11 ವರ್ಷಗಳಲ್ಲಿ ಜಲ ಸಂಚಯ ಅಭಿಯಾನವು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದೆ, ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ ಸುಮಾರು 50 ಲಕ್ಷ ಕೃತಕ ಮಳೆನೀರು ಸಂಗ್ರಹ ರಚನೆಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
'ನೀರಿನ ಸಮಸ್ಯೆ ಪರಿಹರಿಸಲು ಪ್ರತಿಯೊಂದು ಹಳ್ಳಿಯಲ್ಲೂ ಸಮುದಾಯ ಮಟ್ಟದ ಪ್ರಯತ್ನಗಳು ನಡೆಯುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಕೆಲವು ಸ್ಥಳಗಳಲ್ಲಿ ಹಳೆಯ ಕೆರೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ; ಇನ್ನೂ ಕೆಲವೆಡೆ ಮಳೆನೀರನ್ನು ಸಂರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ'ಎಂದು ಅವರು ತಿಳಿಸಿದ್ದಾರೆ.
ಅಮೃತ ಸರೋವರ ಅಭಿಯಾನದಡಿ ದೇಶದಾದ್ಯಂತ 70,000 ಕೆರೆಗಳ ಅಭಿವೃದ್ಧಿ ಮಾಡಲಾಗಿದೆ ಎಂದಿದ್ದಾರೆ.
'ಮಳೆಗಾಲ ಆರಂಭವಾಗುವ ಮೊದಲೇ ಕೆರೆಗಳ ಶುಚಿ ಕಾರ್ಯ ಆರಂಭವಾಗಿದೆ. ಇಂದು, ನಾನು ನಿಮ್ಮೊಂದಿಗೆ ಕೆಲವು ಸ್ಪೂರ್ತಿದಾಯಕ ಉದಾಹರಣೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ನೀರಿನ ಸಂರಕ್ಷಣೆ ಎಷ್ಟು ಉತ್ತಮಗೊಳ್ಳಬಹುದು ಎಂಬುದನ್ನು ಈ ಉದಾಹರಣೆಗಳು ತೋರಿಸುತ್ತವೆ'ಎಂದು ಅವರು ಹೇಳಿದ್ದಾರೆ.
ಛತ್ತೀಸಗಢದ ಕೊರಿಯಾ ಜಿಲ್ಲೆಯನ್ನು ಉಲ್ಲೇಖಿಸಿದ ಪ್ರಧಾನಿ, ಅಲ್ಲಿನ ರೈತರು ಸರಳ, ಪರಿಣಾಮಕಾರಿ ಕಲ್ಪನೆಯನ್ನು ಅನುಸರಿಸಿ ನೀರಿನ ಸಂರಕ್ಷಣೆ ಮಾಡಿದ್ದಾರೆ. ತಮ್ಮ ಹೊಲಗಳಲ್ಲಿ ಸಣ್ಣ ಮರುಪೂರಣ ಗುಂಡಿಗಳು ಮತ್ತು ಇಂಗು ಗುಂಡಿಗಳನ್ನು ಮಾಡುವ ಮೂಲಕ ಮಳೆನೀರು ಹೊಲಗಳಲ್ಲಿ ಉಳಿಸಲು ಮತ್ತು ಕ್ರಮೇಣ ಭೂಮಿಯಲ್ಲಿ ಇಂಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪ್ರದೇಶದಲ್ಲಿ 1,200ಕ್ಕೂ ಹೆಚ್ಚು ರೈತರು ಈ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ. ಗ್ರಾಮದ ಅಂತರ್ಜಲ ಮಟ್ಟವು ಗಮನಾರ್ಹವಾಗಿ ಸುಧಾರಿಸಿದೆ ಎಂದಿದ್ದಾರೆ.
ಅದೇ ರೀತಿ, ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮುಧಿಗುಂಟ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಜನರು ಒಗ್ಗೂಡಿದ್ದಾರೆ. 400 ಕುಟುಂಬಗಳು ತಮ್ಮ ಮನೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ನೀರಿನ ಸಂರಕ್ಷಣೆಗಾಗಿ ಸಾಮೂಹಿಕ ಆಂದೋಲನವನ್ನು ಆರಂಭಿಸಿದ್ದಾರೆ. ಈ ಕ್ರಮವು ಗ್ರಾಮದ ಅಂತರ್ಜಲ ಮಟ್ಟವನ್ನು ಸುಧಾರಿಸುವ ಜೊತೆಗೆ ಕಲುಷಿತ ನೀರಿನಿಂದ ಉಂಟಾಗುವ ರೋಗಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.

