ಕಾಸರಗೋಡು: ರಾಜ್ಯದಲ್ಲಿ ಏ. 9 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಸರಗೋಡು ಜಿಲ್ಲೆ ಸಿದ್ಧವಾಗಿದ್ದು, ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಐಎಎಸ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕರಿ ಚೇಂಬರ್‍ನಲ್ಲಿ ಸುದ್ದಿಗಾರರ ಜತೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಏ. 9ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 11,00,036 ಮತದಾರರಿದ್ದಾರೆ. ಇದರಲ್ಲಿ 5,42,861 ಪುರುಷರು, 5,57,163 ಮಹಿಳೆಯರು ಮತ್ತು 12 ಟ್ರಾನ್ಸ್ಜೆಂಡರ್‍ಗಳು ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ 1141 ಮತಗಟ್ಟೆಗಳನ್ನು ಅಳವಡಿಸಲಾಗಿದೆ.
ಮಾರ್ಚ್ 23 ರವರೆಗೆ ನಾಮಪತ್ರಗಳ ಸ್ವೀಕೃತಿ ನಡೆಯಲಿದ್ದು, 24 ರಂದು ಸೂಕ್ಷ್ಮ ಪರಿಶೀಲನೆ ಹಾಗೂ ಮಾ. 26 ರವರೆಗೆ ನಾಮಪತ್ರ ವಾಪಾಸುಪಡೆದುಕೊಳ್ಳಬಹುದು. ಮತಗಳ ಎಣಿಕೆ ಮೇ 4 ರಂದು ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಮೇ 6 ರಂದು ಕೊನೆಗೊಳ್ಳಲಿದೆ.
ಚುನಾವಣಾ ಪ್ರಕ್ರಿಯೆಗಳಮೇಲ್ವಿಚರಣೆಗೆ ಮತ್ತು ಸುಗಮ ಮತದಾನ ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಸಾರ್ವಜನಿಕ ವೀಕ್ಷಕರು, ವೆಚ್ಚ ವೀಕ್ಷಕರು ಮತ್ತು ಪೆÇಲೀಸ್ ವೀಕ್ಷಕರನ್ನು ನೇಮಿಸಿದೆ. ಹಸಿರು ಸಂಹಿತೆಗೆ ಬದ್ಧವಾಗಿ ಚುನಾವಣೆಗಳು ನಡೆಯಲಿವೆ. ಮಂಜೇಶ್ವರದಲ್ಲಿ 229, ಕಾಸರಗೋಡಿನಲ್ಲಿ 218, ಉದುಮ 237, ಕಾಂಞಂಗಾಡ್ 239 ಹಾಗೂ ತ್ರಿಕರಿಪುರದಲ್ಲಿ 218 ಒಳಗೊಂಡಂತೆ ಜಿಲ್ಲಾ ಮಟ್ಟದಲ್ಲಿ 1141ಮತಗಟ್ಟೆಗಳು ಕಾರ್ಯಾಚರಿಸಲಿದೆ.
ಚುನಾವಣೆಗೆ ಸಂಬಂಧಿಸಿದ ಮತಗಟ್ಟೆ ಸಾಮಗ್ರಿಗಳ ವಿತರಣೆಯನ್ನು ಏಪ್ರಿಲ್ 8 ರಂದು ಬೆಳಿಗ್ಗೆ 8ರಿಂದ ಚುನಾವಣಾ ಸಾಮಗ್ರಿಗಳ ಇತರಣೆ ನಡೆಯುವುದು. ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಸಾಮಗ್ರಿ ವಿತರಣೆ ಮತ್ತು ಸ್ವೀಕೃತಿ ಕೇಂದ್ರ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಸಜ್ಜುಗೊಳಿಸಲಾಗಿದೆ.
ಉದುಮ ಕ್ಷೇತ್ರದ ವಿತರಣಾ ಕೇಂದ್ರ ವಿದ್ಯಾನಗರ ತನ್ಬಿಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ, ಕಾಂಞಂಗಾಡು ಮತ್ತು ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದ ವಿತರಣಾ ಕೇಂದ್ರ ಕಾಂಞಂಗಾಡು ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಾಚರಿಸಲಿದೆ. ಜಿಲ್ಲೆಯಲ್ಲಿ 238ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿಬಹುತೇಕ ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಒಳಗೊಂಡಿದೆ.
ಎಲ್ಲಾ ಬೂತ್‍ಗಳಿಗೂ ಕ್ಯಾಮರಾ ಕಣ್ಣು:
ಈ ಬಾರಿ ಜಿಲ್ಲೆಯ ಎಲ್ಲಾ 1141 ಬೂತ್‍ಗಳಲ್ಲಿ ವೆಬ್‍ಕಾಸ್ಟಿಂಗ್ ಸ್ಥಾಪಿಸಲಾಗುವುದು. ಏಪ್ರಿಲ್ 9 ರಂದು ಬೆಳಿಗ್ಗೆ ಅಣಕು ಮತದಾನ ಪ್ರಾರಂಭದಿಂದ ಅಂತ್ಯದವರೆಗೆ ಮತ್ತು ಮತ ಯಂತ್ರಗಳ ಪ್ಯಾಕಿಂಗ್‍ನವರೆಗೆ ಮತಗಟ್ಟೆಗಳಲ್ಲಿನ ಕಾರ್ಯವೈಖರಿಯನ್ನು ಕಲೆಕ್ಟರೇಟ್‍ನಲ್ಲಿರುವ ನಿಯಂತ್ರಣ ಕೊಠಡಿಯ ಮೂಲಕ ನೇರಪ್ರಸಾರದೊಂದಿಗೆ ವೀಕ್ಷಿಸಲಾಗುವುದು ಎಂದು ತಿಳಿಸಿದರು.
ಮಾದರಿ, ಮಹಿಳಾ ಮತಗಟ್ಟೆ:
ಪ್ರತಿ ಕ್ಷೇತ್ರಕ್ಕೆ ಒಂದರಂತೆ ಮಾದರಿ ಹಾಗೂ ಮಹಿಳಾ ಮತಗಟ್ಟೆಗಳು ಕಾರ್ಯನಿರ್ವಹಿಸಲಿದೆ. ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 4292 ಮತದಾರರು ಮತ್ತು 10259 ಅಂಗವಿಕಲ ಮತದಾರರಿದ್ದು, ಇವರಿಗೆ ಮನೆಯಲ್ಲಿದ್ದುಕೊಂಡೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರಿಗೆ ಮತಚಲಾವಣೆಗೆ 12ಗುರುತಿನ ಚೀಟಿಗಳನ್ನು ಚುನಾವಣಾ ಆಯೋಗ ಅನುಮೋದಿಸಿದ್ದು, ಇದರಲ್ಲಿ ಯಾವುದದರೂ ಒಂದನ್ನು ಬಳಸಿಕೊಳ್ಳಬಹುದು.
ಮತದಾನಕ್ಕೆ 48 ಗಂಟೆಗಳ ಮುಂಚಿತವಾಗಿ ಜಿಲ್ಲಾದ್ಯಂತ ಮದ್ಯವಿತರಣೆಗೆ ನಿಷೇಧ ಹೇರಲಾಗುವುದು. ಏಪ್ರಿಲ್ 7 ರಂದು ಸಂಜೆ 6 ಗಂಟೆಯಿಂದ ಏಪ್ರಿಲ್ 9 ರಂದು ಸಂಜೆ 6 ಗಂಟೆಯವರೆಗೆ ಮದ್ಯನಿಷೇಧ ಜಾರಿಯಲ್ಲಿರಲಿದೆ. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್ ಮತ್ತು ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಉಪಸ್ಥಿತರಿದ್ದರು.



